ಕಾಸರಗೋಡು, ಜು. 08 (DaijiworldNews/AA): ನಗರದ ಹೊರವಲಯದ ಸೂರ್ಲು ವಿನ ಸಲಫಿ ಮಸೀದಿ ಕಚೇರಿಯಿಂದ ನಗ- ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಆಂಧ್ರಪ್ರದೇಶ - ಒಡಿಸ್ಸಾ ಗಡಿಪ್ರದೇಶದಿಂದ ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ವೆಸ್ಟ್ ಗೋದಾವರಿ ಜಿಲ್ಲೆಯ ಮುಹಮ್ಮದ್ ಸಲ್ಮಾನ್ ಅಹಮ್ಮದ್ (34) ಬಂಧಿತ ಆರೋಪಿ. ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಈತ ಮಸೀದಿ ಕೇಂದ್ರೀಕರಿಸಿ ಕಳವು ನಡೆಸುತ್ತಿದ್ದನು ಎನ್ನಲಾಗಿದೆ.
ಜೂನ್ 24ರಂದು ಬೆಳಗ್ಗೆ ಮಸೀದಿ ಕಚೇರಿಯಿಂದ 3.10 ಲಕ್ಷ ರೂ. ಹಾಗೂ ಎರಡು ಪವನ್ ಚಿನ್ನಾಭರಣವನ್ನು ಕಳವು ಗೈಯಲಾಗಿತ್ತು. ಜೂನ್ 29ರಂದು ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿಯು ಮಸೀದಿಯೊಳಗೆ ಪ್ರವೇಶಿಸುವುದು, ನಗ- ನಗದು ಸಹಿತ ಪರಾರಿಯಾಗುತ್ತಿರುವ ದೃಶ್ಯ ಪೊಲೀಸರಿಗೆ ಲಭಿಸಿತ್ತು. ಕಚೇರಿ ಕಾರ್ಯದರ್ಶಿ ಮುಹಮ್ಮದ್ ಮಸೂದ್ ರವರ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
ಆರೋಪಿಯು ಕಣ್ಣೂರಿನ ಪಾನೂರು, ಮಲಪ್ಪುರಂ, ಪಾಲಕ್ಕಾಡ್, ಕೋಜಿಕ್ಕೋಡ್ ಕಸಬಾ., ಏಲತ್ತೂರು ಮೊದಲಾದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಮಸೀದಿಯಲ್ಲಿನ ಕಳವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಕಳವುಗೈದ ಹಣದೊಂದಿಗೆ ಸ್ನೇಹಿತರ ಜೊತೆ ಐಷಾರಾಮಿ ಜೀವನ ನಡೆಸುತ್ತಿದ್ದನು ಎನ್ನಲಾಗಿದೆ. ಕಾಸರಗೋಡಿನಲ್ಲಿ ನಡೆದ ಕಳವು ಬಳಿಕ ಆರೋಪಿಯು ಊರಿಗೆ ಪರಾರಿಗಾಗಿದ್ದು, ಪೊಲೀಸರು 1,200 ಕಿಮೀ ನಷ್ಟು ಬೆನ್ನಟ್ಟಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಸರಗೋಡು ಡಿವೈಎಸ್ಪಿ ಪಿ.ಕೆ ಸುನಿಲ್ ಕುಮಾರ್ ನೇತೃತ್ವ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿತ್ತು.