ಮಂಗಳೂರು, ಜು. 05 (DaijiworldNews/AA): ಪುತ್ತೂರು ವಿದ್ಯಾರ್ಥಿನಿ ಪ್ರಗ್ನೆನ್ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಕೃಷ್ಣ ಜೆ. ರಾವ್ ಗೆ ಪರಾರಿಯಾಗಲು ಸಹಕರಿಸಿದ ಆರೋಪದಡಿ ಆರೋಪಿಯ ತಂದೆ ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರನ್ನು ಪೊಲೀಸರು ಇಂದು ಬಂಧಿಸಿದ್ದರು. ಇದೀಗ ಬಂಧನದ ಬೆನ್ನಲ್ಲೇ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜೂನ್ 24 ರಿಂದ ತಲೆಮರೆಸಿಕೊಂಡಿದ್ದ ಕೃಷ್ಣ ಜೆ. ರಾವ್ ಅವರನ್ನು ಇಂದು ಬೆಳಿಗ್ಗೆ ಮೈಸೂರಿನಲ್ಲಿ ಬಂಧಿಸಲಾಗಿತ್ತು. ಪುತ್ತೂರಿನ ವಿದ್ಯಾರ್ಥಿನಿಯೊಬ್ಬಳ ಪ್ರಗ್ನೆನ್ಸಿಗೆ ಸಂಬಂಧಿಸಿದ ವಿವಾದಾತ್ಮಕ ಪ್ರಕರಣದಲ್ಲಿ ಕೃಷ್ಣ ಜೆ. ರಾವ್ ಪ್ರಮುಖ ಆರೋಪಿಯಾಗಿದ್ದ. ಆರೋಪಿ ಕಷ್ಣನ ವಿರುದ್ಧ ಪ್ರಕರಣ ದಾಖಲಾದ ನಂತರ, ಆತ ತಲೆಮರೆಸಿಕೊಂಡಿದ್ದರಿಂದ ಸ್ಥಳೀಯ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು.
ವ್ಯಾಪಕ ತನಿಖೆಯ ನಂತರ, ಕೃಷ್ಣನನ್ನು ಇಂದು ಬೆಳಿಗ್ಗೆ ಮೈಸೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಲಾಯಿತು. ಇದಾದ ಬೆನ್ನಲ್ಲೇ, ಕೃಷ್ಣನಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಆತನ ತಂದೆ ಜಗನ್ನಿವಾಸ ರಾವ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು, ಸಂಪೂರ್ಣ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಹೆಚ್ಚಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದ್ದು, ಸದ್ಯ ಆರೋಪಿ ಕೃಷ್ಣ ಪೊಲೀಸ್ ವಶದಲ್ಲಿದ್ದಾನೆ.