ಬೆಳ್ತಂಗಡಿ, ಜು. 05 (DaijiworldNews/AA): ಅಕ್ರಮ ಮಾಂಸ ವ್ಯಾಪಾರದ ವಿರುದ್ಧ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸರು, , ಬೆಳ್ತಂಗಡಿ ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರಿನ ಮಾಂಸವನ್ನು ಮಾರಾಟ ಮಾಡುತ್ತಿದ್ದ ಅಂಗಡಿಯೊಂದರ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ಮಾರಾಟಕ್ಕೆ ಸಂಗ್ರಹಿಸಿದ್ದ 47 ಕೆ.ಜಿ ದನದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಜಾನುವಾರಿನ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ, ಬೆಳ್ತಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಯಲ್ಲಪ್ಪ ಹೆಚ್ ಮಾದರ ಅವರ ನೇತೃತ್ವದಲ್ಲಿ ಜುಲೈ 2ರ ಸಂಜೆ ಈ ಕಾರ್ಯಾಚರಣೆ ನಡೆಯಿತು.
ಬೆಳ್ತಂಗಡಿ ಮಲವಂತಿಗೆ ಗ್ರಾಮದ ಆರೋಪಿಗಳಾದ ಅಬ್ದುಲ್ ರಜಾಕ್ (28) ಮತ್ತು ಅಬ್ದುಲ್ ರವೂಪ್ (20) ಯಾವುದೇ ಪರವಾನಗಿ ಇಲ್ಲದೆ ಅಂಗಡಿಯೊಳಗೆ ಪ್ರಿಡ್ಜ್ ನಲ್ಲಿ ಇರಿಸಿರುವುದು ಕಂಡುಬಂದಿರುತ್ತದೆ. ವಧೆ ಮಾಡಲಾದ ಜಾನುವಾರಿನ ಬಗ್ಗೆ ವಿಚಾರಿಸಲಾಗಿ, ಸಹೋದರರಾದ ಆರೋಪಿಗಳು ಅವರ ಮನೆಯಲ್ಲಿ ಸಾಕಿದ್ದ ಜಾನುವಾರನ್ನು ವಧೆ ಮಾಡಿ, ಮಾಂಸ ಮಾರಾಟಕ್ಕೆ ಯತ್ನಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಂಖ್ಯೆ 51/2025 ಅಡಿಯಲ್ಲಿ ಕರ್ನಾಟಕ ಗೋವದೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣಾ ಅದಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ತನಿಖೆ ಮುಂದುವರಿದಿದ್ದು, ಅಂಗಡಿ ಮಾಲೀಕರು ಪರವಾನಗಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.