ಕಾಸರಗೋಡು, ಜು. 05 (DaijiworldNews/AA): ಮನೆಯವರು ಮಲಗಿದ್ದ ಸಂದರ್ಭದಲ್ಲಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳನೋರ್ವ ಕಳವಿಗೆ ಯತ್ನಿಸಿದ ಘಟನೆ ಶನಿವಾರ ಮುಂಜಾನೆ ಉಪ್ಪಳ ಸಮೀಪದ ಜೋಡುಕಲ್ ಎಂಬಲ್ಲಿ ನಡೆದಿದ್ದು, ಗಂಟೆಗಳ ಅವಧಿಯಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಮಂಜೇಶ್ವರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಜೋಡುಕಲ್ಲು ಶಾಂತಿಯೋಡಿನ ಕಲಂದರ್ ಶಾಫಿ (34) ಬಂಧಿತ ಆರೋಪಿ.
ಬೇಕೂರು ಕನ್ನಾಟಿಪಾರೆಯ ಹರೀಶ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ಬಾಗಿಲು ಮುರಿದು ಒಳನುಗ್ಗಿದ್ದು, ಶಬ್ದ ಕೇಳಿ ಮನೆಯವರು ಎಚ್ಚೆತ್ತು ಬೊಬ್ಬೆ ಹಾಕಿದಾಗ ಆರೋಪಿ ಮನೆಯಿಂದ ಪರಾರಿಯಾಗಿದ್ದಾನೆ.
ಬಳಿಕ ಆರೋಪಿಯು ಆಟೋ ರಿಕ್ಷಾವೊಂದರಲ್ಲಿ ತೆರಳುವುದನ್ನು ಮನೆಯವರು ಗಮನಿಸಿದ್ದಾರೆ. ಮಂಜೇಶ್ವರ ಪೊಲೀಸರಿಗೆ ನೀಡಿದ ದೂರಿನಂತೆ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು, ಪರಿಸರದ ಸಿಸಿ ಟಿವಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯ ಗುರುತನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತನು 2021 ರಲ್ಲಿ ಐದು ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.