ಬೆಳ್ತಂಗಡಿ,ಜು. 05 (DaijiworldNews/AK): ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 39/2025 ರಲ್ಲಿ ದೂರುದಾರರ ಪರ ವಕೀಲರು ನೀಡಿದ ಪತ್ರಿಕಾ ಪ್ರಕಟಣೆಯ ನಂತರ ಹಲವರು ದೂರಿನಲ್ಲಿ ಉಲ್ಲೇಖಿಸಿರುವ ಕಳೇಬರದ ಕುರಿತು ವಿಚಾರಿಸುತ್ತಿದ್ದು, ಈ ಪ್ರಶ್ನೆಗಳಿಗೆ ಉತ್ತರವಾಗಿ, ದೂರಿನಲ್ಲಿ ಉಲ್ಲೇಖಿಸಲಾದ ರೇಖಾಚಿತ್ರಗಳ ಕುರಿತು ಪೊಲೀಸರು ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಅಧಿಕೃತ ಹೇಳಿಕೆಯ ಪ್ರಕಾರ, ಸದರಿ ದೂರಿಗೆ ಸಂಬಂಧಿಸಿದಂತೆ ತಲೆಬುರುಡೆ ಮತ್ತು ಭಾಗಶಃ ಅಸ್ಥಿಪಂಜರದ ಅವಶೇಷಗಳನ್ನು ತೋರಿಸುವ ಎರಡು ಫೋಟೋಗಳ ಕಲರ್ ಝೆರಾಕ್ಸ್ ಪ್ರತಿಯನ್ನು ಮಾತ್ರ ಪೊಲೀಸರಿಗೆ ಇದುವರೆಗೆ ಸ್ವೀಕರಿಸಲಾಗಿದೆ. ಇವುಗಳನ್ನು ಹೊರತುಪಡಿಸಿ, ಇಲ್ಲಿಯವರೆಗೆ ಪೊಲೀಸ್ ಠಾಣೆಗೆ ಯಾವುದೇ ರೇಖಾಚಿತ್ರಗಳನ್ನು ಸಲ್ಲಿಸಲಾಗಿಲ್ಲ.
ದೂರುದಾರರ ಪರ ವಕೀಲರು ದೂರು ದಾಖಲಿಸುವಾಗ, ರೇಖಾಚಿತ್ರಗಳನ್ನು ನಂತರದ ಹಂತದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಲಿಖಿತ ಹೇಳಿಕೆ ನೀಡಿದ್ದರು.