ಉಪ್ಪಿನಂಗಡಿ ,ಜು. 05 (DaijiworldNews/AK): ಉಪ್ಪಿನಂಗಡಿ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಲಾರಿ ಹಾಗೂ ಈಚರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಈಚರ್ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಗಾಯಗೊಂಡ ಈಚರ್ ವಾಹನದ ಚಾಲಕನನ್ನು ಚನ್ನರಾಯಪಟ್ಟಣ ತಾಲೂಕಿನ ನವಿಲುಹೂಸೂರು ಗ್ರಾಮದ ನಿವಾಸಿ ನಟರಾಜ್ (48) ಎಂದು ಗುರುತಿಸಲಾಗಿದೆ. ಘಟನೆಯಿಂದ ನಜ್ಜುಗುಜ್ಜಾದ ಈಚರ್ನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಪ್ರಯಾಸದಿಂದ ಹೊರತೆಗೆಯಲಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೊಂದು ಲಾರಿ ಚಾಲಕ ಹಾಸನದ ಆಲೂರು ಮೂಲದ ಶಶಿ (26) ಎಂಬವರು ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಬೆಂಗಳೂರಿಗೆ ಪ್ಲಾಸ್ಟಿಕ್ ಮಣಿ ಸಾಗಿಸುತ್ತಿದ್ದ ಈಚರ್ ಲಾರಿ ಬರ್ಚಿನಹಳ್ಳ ತಲುಪುತ್ತಿದ್ದಂತೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾಗಿದೆ.
ಘಟನೆಯಿಂದ ಕೆಲ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಉಪ್ಪಿನಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.