ಬಂಟ್ವಾಳ, ಜೂ. 26 (DaijiworldNews/TA): ನೇತ್ರಾವತಿ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಮೀಟರ್ ಗೆ ತಲುಪಿದೆ. ಗುರುವಾರ ಬೆಳಗ್ಗೆ 6 ಗಂಟೆಯ ವೇಳೆಗೆ 6.7 ಮೀಟರ್ ನಲ್ಲಿದ್ದ ನೀರಿನ ಮಟ್ಟ ಸುಮಾರು 8.30 ಗಂಟೆಗೆ 7.5 ಮೀಟರ್ ಗೆ ಏರಿಕೆಯಾಗಿದೆ.


ಅಪಾಯದ ಮಟ್ಟ 8.5 ಮೀ. ಆಗಿದ್ದು, ಬಂಟ್ವಾಳ ತಾಲೂಕಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿಲ್ಲ. ಆದರೂ ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ತಾಲೂಕು ಆಡಳಿತ ತಿಳಿಸಿದೆ. ನೇತ್ರಾವತಿ ನದಿಯು ತುಂಬಿ ಹರಿಯುತ್ತಿರುವ ಹಿನ್ನೆಲೆ ಯಾರೂ ಕೂಡ ನದಿ ತೀರಕ್ಕೆ ತೆರಳಬಾರದು, ಅಪಾಯ ಹೆಚ್ಚಿರುವುದರಿಂದ ಜಾಗರೂಕತೆಯಿಂದ ಇರುವಂತೆ ತಿಳಿಸಿದೆ.
ಘಟ್ಟ ಪ್ರದೇಶದಲ್ಲಿ ಅತಿಯಾದ ಮಳೆಗೆ ಉಪ್ಪಿನಂಗಡಿ,ಹಾಗೂ ಬಂಟ್ವಾಳದ ಡ್ಯಾಂ ಗಳು ಭರ್ತಿಯಾಗಿದೆ. ಡ್ಯಾಂ ಗಳು ಭರ್ತಿಯಾದ ಕೂಡಲೇ ನೀರು ಹೊರಬಿಡುವುದರಿಂದ ನೇತ್ರಾವತಿ ನದಿ ಕೆಳಭಾಗದಲ್ಲಿ ತಗ್ಗುಪ್ರದೇಶಗಳು ಜಲಾವೃತಗೊಳ್ಳುತ್ತದೆ ಮತ್ತು ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ ಎಂದು ಹೇಳಲಾಗಿದೆ.