ಬಂಟ್ವಾಳ, ಜೂ. 26 (DaijiworldNews/TA): ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಬಂಟ್ವಾಳ ವೃತ್ತದ ಪೋಲೀಸ್ ಠಾಣೆ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ "ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ" ಅಭಿಯಾನ - 2025 ಕಾರ್ಯಕ್ರಮ ಬಿಸಿರೋಡಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ಅವರು ಮಾತನಾಡಿ, ಪೋಲೀಸ್ ಇಲಾಖೆಯು ವಿದ್ಯಾರ್ಥಿಗಳನ್ನೇ ಕೇಂದ್ರೀಕರಿಸಿ ಡ್ರಗ್ಸ್ ನಿಯಂತ್ರಣಕ್ಕೆ ಪ್ರಯತ್ನ ಮಾಡುತ್ತಿದ್ದು, ವಿದ್ಯಾರ್ಥಿಗಳು ಜವಬ್ದಾರಿಯುತ ನಾಗರಿಕರಾಗಿ ಸಮಾಜಕ್ಕೆ ಬಂದಾಗ,ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಜಯಶಂಕರ್ ಮತ್ತು ಡಾ.ಸಂಸ್ಕೃತಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಹಿಲ್ಸ್ ಇದರ ನಿಯೋಜಿತ ಅಧ್ಯಕ್ಷ ವಿಜಯಪೆರ್ನಾಂಡಿಸ್, ರೋಟರಿ ಕ್ಲಬ್ ಮೊಡಂಕಾಪು ಇದರ ಅದ್ಯಕ್ಷ ಅಲೆಕ್ಸಾಂಡರ್ ಲೋಬೋ, ಕಾರ್ಮೆಲ್ ಕಾನ್ವೆಂಟ್ ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಸಿ.ಪೆಲ್ಸಿಟಾ ಎ.ಸಿ. ವಿಟ್ಲ ಜೂನಿಯರ್ ಕಾಲೇಜ್ ದೈಹಿಕ ಶಿಕ್ಷಕ ನಿರ್ದೇಶಕ ಶ್ರೀನಿವಾಸ ಗೌಡ, ಬಿ.ಮೂಡ ಸ.ಪ.ಪೂರ್ವ ಕಾಲೇಜು ಪ್ರಾಂಶುಪಾಲ ಯೂಸುಫ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು. ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಬಿಸಿರೋಡುವರೆಗೆ ಮೊಡಂಕಾಪು, ವಿಠಲಪದವಿ ಪೂರ್ವ ಕಾಲೇಜು,ಹಾಗೂ ಬಿ.ಮೂಡ ಕಾಲೇಜಿನ ವಿದ್ಯಾರ್ಥಿಗಳ ಜಾಥ ಕಾರ್ಯಕ್ರಮ ನಡೆಯಿತು.