ವಿಟ್ಲ, ಜೂ. 11 (DaijiworldNews/AA): ಜುಗಾರಿ ಅಡ್ಡೆಗೆ ದಾಳಿ ಪ್ರಕರಣದಲ್ಲಿ ಆರೋಪಿಯೋರ್ವನ ಬಳಿ ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ವಿಟ್ಲ ಠಾಣಾ ಪಿಎಸ್ಐ ಕೌಶಿಕ್ ಬಿ.ಸಿ. ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಕಳೆದ ಮೇ. 08 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ ಬಗ್ಗೆ ಮಾಹಿತಿ ದೊರೆತ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ಪಿಎಸ್ಐ ಕೌಶಿಕ್ ಬಿಸಿ ದಾಳಿ ನಡೆಸಿದ್ದರು. ಈ ವೇಳೆ ಜುಗಾರಿ ಆಟ ಆಡುತ್ತಿದ್ದವರು ಪರಾರಿಯಾಗಿದ್ದು, ಸ್ಥಳದಲ್ಲಿ ಬೈಕೊಂದು ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಪಿಎಸ್ಐ ಕೌಶಿಕ್ ಬಿ.ಸಿ ಅವರು ಕಾನೂನಾತ್ಮಕ ಕ್ರಮ ಜರುಗಿಸದೇ ಸ್ಥಳದಲ್ಲಿ ಪತ್ತೆಯಾಗಿದ್ದ ಬೈಕ್ ಮಾಲಕನಿಗೆ ಕರೆಮಾಡಿ ಠಾಣೆಗೆ ಬರಮಾಡಿಕೊಂಡಿದ್ದಾರೆ. ಬಳಿಕ ಆ ಬೈಕ್ ಮಾಲಕನಿಗೆ ಮೂರನೇ ವ್ಯಕ್ತಿಯೊಬ್ಬನ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನಲೆ ಪಿಎಸ್ಐ ಕೌಶಿಕ್ ಬಿ.ಸಿ ಅವರನ್ನು ಮೇ 12ರಂದು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.