ಕಡಬ, ಜೂ. 09 (DaijiworldNews/AA): ರೈಲ್ವೇ ಟ್ರ್ಯಾಕ್ ನಲ್ಲಿ ಅಣ್ಣನನ್ನು ತಮ್ಮನೇ ಬೆನ್ನಟ್ಟಿ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಕೋಡಿಂಬಾಳದ ಕೋರಿಯಾರ್ ಸಮೀಪ ಭಾನುವಾರ ಸಂಜೆ ನಡೆದಿದೆ. ಗಾಯಾಳುವಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಾಳುವನ್ನು ಹನುಮಪ್ಪ ಎಂದು ಗುರುತಿಸಲಾಗಿದೆ.
ಗದಗ ಮೂಲದ ಅಣ್ಣ ತಮ್ಮಂದಿರು ಪುತ್ತೂರಿನಲ್ಲಿ ಕೆಲಸ ಮಾಡುತ್ತಿದ್ದರು. ಜೂ.8 ರ ಮಧ್ಯಾಹ್ನದ ಮಂಗಳೂರು- ಬೆಂಗಳೂರು ರೈಲು ಮಾರ್ಗದಲ್ಲಿ ಸಂಚರಿಸುವ ಪ್ಯಾಸೆಂಜರ್ ರೈಲಿನಲ್ಲಿ ಬಂದು ಬಜಕರೆ ರೈಲು ನಿಲ್ದಾಣದಲ್ಲಿ ಇಬ್ಬರು ಇಳಿದಿದ್ದರು ಎನ್ನಲಾಗಿದೆ.
ರೈಲು ಹೋದ ಬಳಿಕ ಸುಮಾರು 500 ಮೀ ಮುಂದಕ್ಕೆ ಕರೆದುಕೊಂಡು ಬಂದು ತಮ್ಮ ನಿಂಗಪ್ಪ ಎಂಬಾತ ಏಕಾಎಕಿ ತನ್ನ ಕೈಯಲ್ಲಿದ್ದ ಪೆಟ್ರೋಲನ್ನು ಹನುಮಪ್ಪನ ಮೇಲೆ ಎರಚಿ ಬೆಂಕಿ ಹಚ್ಚಿದ್ದಾನೆ. ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದ ಗಾಯಾಳು ಪಕ್ಕದಲ್ಲೇ ಇದ್ದ ಚರಂಡಿ ನೀರಿಗೆ ಜಿಗಿದ ಕಾರಣ ಬೆಂಕಿ ನಂದಿದೆ. ಭಾರೀ ಕಿರುಚಾಟ ಕೇಳಿ ಬಂದ ಹಿನ್ನಲೆ ಸ್ಥಳೀಯರು ಹೋಗಿ ಗಮನಿಸಿದಾಗ ಗಾಯಾಳು ಗಂಭೀರ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.
ಕೂಡಲೇ ಗಾಯಾಳುವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಡಬ ಪೊಲೀಸರು ಬೆಂಕಿ ಹಚ್ಚಿರುವ ತಮ್ಮ ನಿಂಗಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರೈಲೇ ಹಳಿಯಲ್ಲಿ ಈ ಘಟನೆ ನಡೆದಿರುವುದರಿಂದ ಪೊಲೀಸರು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ. ಈ ಘಟನೆಗೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.