ಮಂಗಳೂರು, ಮೇ. 23 (DaijiworldNews/AA): ಚೂರಿಯಿಂದ ಇರಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿ, ಅವರ ಇಬ್ಬರು ಪುತ್ರರು ಗಾಯಗೊಂಡಿರುವ ಘಟನೆ ಮಂಗಳೂರು ನಗರದ ಹೊರವಲಯದ ವಳಚ್ಚಿಲ್ ಎಂಬಲ್ಲಿ ಮೇ 22ರ ರಾತ್ರಿ ನಡೆದಿದೆ.

ಮೃತ ಸುಲೈಮಾನ್ ಹಾಗೂ ಆರೋಪಿ ಮುಸ್ತಾಫ
ಮೃತರನ್ನು ವಾಮಂಜೂರು ನಿವಾಸಿ ಪುತ್ರ ಸುಲೈಮಾನ್ (50) ಎಂದು ಗುರುತಿಸಲಾಗಿದೆ. ಅವರ ಪುತ್ರರಾದ ಸಿಯಾಬ್ ಹಾಗೂ ರಿಯಾಬ್ ಮೇಲೂ ಆರೋಪಿ ಮುಸ್ತಾಫ(30) ಹಲ್ಲೆ ನಡೆಸಿದ್ದಾನೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಸುಲೈಮಾನ್, ಸುಮಾರು ಎಂಟು ತಿಂಗಳ ಹಿಂದೆ ತನ್ನ ಸಂಬಂಧಿ, ಆರೋಪಿ ಮುಸ್ತಫಾನೊಂದಿಗೆ ಶಾಹೀನಾಜ್ ಎಂಬ ಮಹಿಳೆಯ ಮದುವೆ ಏರ್ಪಡಿಸಿದ್ದರು. ಆದರೆ ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ, ಘಟನೆಯ ಎರಡು ತಿಂಗಳ ಮೊದಲು ಶಾಹೀನಾಜ್ ತನ್ನ ತವರು ಮನೆಗೆ ಹಿಂದಿರುಗಿದ್ದರು. ಇದರಿಂದಾಗಿ ಮುಸ್ತಫಾ ಮತ್ತು ಸುಲೈಮಾನ್ ನಡುವೆ ವೈಮನಸ್ಸು ಉಂಟಾಗಿತ್ತು.
ಘಟನೆ ನಡೆದ ರಾತ್ರಿ, ಮುಸ್ತಫಾ ಸುಲೈಮಾನ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರೆ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸುಲೈಮಾನ್ ತನ್ನ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಜೊತೆ ವಿಷಯವನ್ನು ಬಗೆಹರಿಸಲು ವಳಚ್ಚಿಲ್ನಲ್ಲಿರುವ ಮುಸ್ತಫಾ ಅವರ ನಿವಾಸಕ್ಕೆ ಹೋಗಿದ್ದಾರೆ. ಪುತ್ರರು ರಸ್ತೆಬದಿಯಲ್ಲಿ ಕಾಯುತ್ತಿದ್ದಾಗ, ಸುಲೈಮಾನ್ ಮುಸ್ತಫಾ ಅವರೊಂದಿಗೆ ಮಾತನಾಡಲು ಒಬ್ಬರೇ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಅವರು ಹಿಂತಿರುಗಿ ಬಂದಿದ್ದು, ಮಾತುಕತೆ ಫಲಪ್ರದವಾಗಿಲ್ಲ ಎಂದು ಹೇಳಿ ಅಲ್ಲಿಂದ ಹೊರಡಲು ಸೂಚಿಸಿದ್ದಾರೆ.
ಅದೇ ಸಮಯದಲ್ಲಿ, ಮುಸ್ತಫಾ ತನ್ನ ಮನೆಯಿಂದ ಕೂಗುತ್ತಾ ಬಂದಿದ್ದು, ಬ್ಯಾರಿ ಭಾಷೆಯಲ್ಲಿ ಬೆದರಿಕೆಗಳನ್ನು ಹಾಕಿ, ಸುಲೈಮಾನ್ ಅವರ ಕುತ್ತಿಗೆಯ ಬಲಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಸುಲೈಮಾನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ನಂತರ ಮುಸ್ತಫಾ ಪುತ್ರರತ್ತ ತಿರುಗಿ ಸಿಯಾಬ್ ಅವರ ಎದೆಯ ಎಡಭಾಗಕ್ಕೆ ಮತ್ತು ರಿಯಾಬ್ ಅವರ ಬಲ ಮುಂದೋಳಿಗೆ ಇರಿದಿದ್ದಾನೆ ಎನ್ನಲಾಗಿದೆ.
ಸ್ಥಳೀಯರ ಸಹಾಯದಿಂದ ಗಾಯಗೊಂಡವರನ್ನು ರಾತ್ರಿ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಸುಲೈಮಾನ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮೊದಲೇ ಮೃತಪಟ್ಟಿದ್ದಾರೆ. ಅವರ ಪುತ್ರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), 2023 ರ ಸೆಕ್ಷನ್ 103(1), 109(1), 118(1), 351(2), 351(3), ಮತ್ತು 352 ರ ಅಡಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುಸ್ತಫಾನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.