ಬೆಳ್ತಂಗಡಿ, ಮೇ. 21 (DaijiworldNews/TA): ಇತ್ತೀಚೆಗೆ ಪಂಜಾಬ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ 22 ವರ್ಷದ ಆಕಾಂಕ್ಷಾ ಎಸ್ ನಾಯರ್ ಮೃತದೇಹವನ್ನು ಬುಧವಾರ ಅವರ ಹುಟ್ಟೂರಾದ ಧರ್ಮಸ್ಥಳಕ್ಕೆ ತರಲಾಯಿತು.

ಧರ್ಮಸ್ಥಳ ಬಳಿಯ ಬೋಲಿಯಾರ್ನ ಸುರೇಂದ್ರ ನಾಯರ್ ಮತ್ತು ಸಿಂಧು ದೇವಿ ದಂಪತಿಯ ಪುತ್ರಿ ಆಕಾಂಕ್ಷಾ ದೆಹಲಿಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಪಂಜಾಬ್ನ ಕಾಲೇಜು ಕಟ್ಟಡದಿಂದ ಹಾರಿ ಅವರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ ಎಂದು ವರದಿಯಾಗಿದ್ದವು.
ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಆಕೆಯ ಮೃತದೇಹ ಬೆಂಗಳೂರಿಗೆ ತಲುಪಿದ್ದು, ನಂತರ ಆಂಬ್ಯುಲೆನ್ಸ್ ಮೂಲಕ ಬೋಲಿಯಾರ್ನಲ್ಲಿರುವ ಅವರ ಮನೆಗೆ ತರಲಾಯಿತು. ಆಕಾಂಕ್ಷಾ ಕುಟುಂಬದಲ್ಲಿ ಎರಡನೇ ಮಗಳಾಗಿದ್ದು, ಶೈಕ್ಷಣಿಕವಾಗಿ ಪ್ರತಿಭಾನ್ವಿತಳು ಮತ್ತು ವೃತ್ತಿಪರವಾಗಿ ಹೆಸರುವಾಸಿಯಾಗಿದ್ದಳು.
ಮನೆಯ ಅಂಗಳದಲ್ಲಿ ಮೃತದೇಹದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ನೂರಾರು ಮಂದಿ ಸ್ಥಳೀಯರು ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಅರ್ಪಿಸಿದರು. ಆಕಾಂಕ್ಷಾ ತಂದೆ ಸುರೇಂದ್ರನ್ ನಾಯರ್ ಹಾಗೂ ಅವರ ಸಹೋದರ ಪ್ರಕಾಶ್ ಅವರು ಮನೆಗೆ ಪಾರ್ಥಿವ ಶರೀರವನ್ನು ತಂದು ಅಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಿದರು. ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಪಾರ್ಥಿವ ಶರೀರವನ್ನು ಮನೆಯ ಅಂಗಳಕ್ಕೆ ತಂದಾಗ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಕಾಂಕ್ಷಾ ಅವರ ತಾಯಿ ಸಿಂಧೂದೇವಿ, 'ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ಪಂಜಾಬಿನ ಪ್ರೊಫೆಸರ್ ದಂಪತಿ ಸಂಚು ಮಾಡಿ ಕೊಲೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
ತಾಯಿ ಸಿಂಧೂದೇವಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕ ಹರೀಶ್ ಪೂಂಜ ಅವರು ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ್ರಕರಣದ ಸಮಗ್ರ ತನಿಖೆಗೆ ರಾಜ್ಯ ಗೃಹಸಚಿವರ ಮೂಲಕ ಪಂಜಾಬ್ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ಭರವಸೆ ನೀಡಿದರು.