ಉಡುಪಿ, ಮೇ. 18 (DaijiworldNews/TA): ಪರಿಶಿಷ್ಟ ಜಾತಿ ಒಳಮೀಸಲಾತಿ ಸಂಬಂಧ ಸಮೀಕ್ಷೆ ಅವಧಿಯನ್ನು ಮೇ 25ರ ವರೆಗೂ ವಿಸ್ತರಣೆ ಮಾಡಲಾಗಿದ್ದು, ಅಲ್ಲಿಯವರೆಗೂ ಮನೆ-ಮನೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿರಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪರಿಶಿಷ್ಠ ಜಾತಿ ಒಳಮೀಸಲಾತಿ ಸಂಬಂಧ ಸಮೀಕ್ಷೆ ಅವಧಿಯನ್ನು ಮೇ 17ಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ ಈಗ ಸಮೀಕ್ಷೆಯ ಅವಧಿಯನ್ನು ಮೇ 25ರ ವರೆಗೆ ವಿಸ್ತರಿಸಲಾಗಿದೆ. ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ) ಮೇ 26ರಿಂದ ಮೇ 28ರ ವರೆಗೆ ವಿಸ್ತರಿಸಲಾಗಿದೆ. ಆನ್ಲೈನ್ ಮೂಲಕ ಸ್ವಯಂ ಘೋಷಣೆ ದಿನಾಂಕವನ್ನು ಮೇ 19ರಿಂದ ಮೇ 28ರ ವರೆಗೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
2011ರ ಜನಗಣತಿ ವರದಿ ಪ್ರಕಾರ ಒಟ್ಟು 15329 ಪ.ಜಾತಿ ಕುಟುಂಬಗಳ ಪೈಕಿ ಈವರೆಗೆ 14941 ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ ಶೇ 95.75 ರಷ್ಟು ಪ್ರಗತಿ ಸಾಧಿಸಲಾಗಿದೆ. ಗಣತಿದಾರರು ತಮ್ಮ ಬೂತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳ ಮನೆಗೆ ಕಡ್ಡಾಯವಾಗಿ ತೆರಳಿ ಸಮೀಕ್ಷೆ ಕೈಗೊಂಡಿರುವ ಕುರಿತು ಮಾಹಿತಿಯನ್ನು ಅಗತ್ಯವಾಗಿ ನೀಡಲು ಸೂಚನೆ ನೀಡಿದ್ದು, ಅದರಂತೆ ಎಲ್ಲಾ ಗಣತಿದಾರರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.