ಕಡಬ, ಮೇ. 13 (DaijiworldNews/AK): ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಹರೀಶ್ ಇಂಜಾಡಿ ಅವರು ಆಯ್ಕೆಯಾಗಿದ್ದಾರೆ. ಆದರೆ ಅಲ್ಲಿನ ಗ್ರಾಮಸ್ಥರು ರೌಡಿಶೀಟರ್ನನ್ನು ಸರ್ಕಾರ ಆಯ್ಕೆ ಮಾಡಿದೆ ಎಂದು ಭಾರಿ ವಿರೋಧದ ವ್ಯಕ್ತಪಡಿಸಿದೆ.

ಗ್ರಾಪಂ ಸದಸ್ಯನೂ ಆಗಿರುವ ಹರೀಶ್ ಇಂಜಾಡಿಗೆ ಅಧ್ಯಕ್ಷ ಗಿರಿ ಸಿಕ್ಕಿದೆ. ಇಂಜಾಡಿ ದೇವಸ್ಥಾನದ ಆಡಳಿತ ಮಂಡಳಿಗೆ ವಂಚಿಸಿ ಜೈಲುಪಾಲಾಗಿದ್ದ. ಈತನಿಗೆ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಫಾರಸು ಮಾಡಿದ್ದರು. ಅದರಂತೆ ಹರೀಶ್ಗೆ, ಕುಕ್ಕೆ ವ್ಯವಸ್ಥಾಪನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ ಒಲಿದಿದೆ. ಆಡಳಿತ ಮಂಡಳಿ ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧ ಇದ್ದವರು ಸದಸ್ಯರಾಗಬಾರದು ಎಂಬ ನಿಯಮ ಮೀರಿ ಆಯ್ಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ನಕಲಿ ಚೆಕ್ ನೀಡಿ ಹಣ್ಣು-ಕಾಯಿ ಟೆಂಡರ್ ಮಾಡಿ ದೇವಸ್ಥಾನಕ್ಕೆ ವಂಚಿಸಿದ್ದರು ಎಂಬ ಆರೋಪ ಕೂಡ ಹರೀಶ್ ಇಂಜಾಡಿ ಮೇಲೆ ಇದೆ. ಈ ಪ್ರಕರಣದಲ್ಲಿ ಬಂಧನವೂ ಆಗಿತ್ತು. ಹರೀಶ್ಗೆ ಸದಸ್ಯ ಸ್ಥಾನ ನೀಡಲು ಸುಬ್ರಹ್ಮಣ್ಯ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಮರಳು ಮಾಫಿಯಾ ಮತ್ತು ಮರ ಕಳ್ಳ ಸಾಗಾಣೆ ಆರೋಪಿಸಿ ದಾಖಲೆ ಸಮೇತ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೆ ಸುಬ್ರಹ್ಮಣ್ಯ ಗ್ರಾಮಸ್ಥರು ಪತ್ರ ಬರೆದಿದ್ದರು. ಆದರೆ ಗ್ರಾಮಸ್ಥರ ಮನವಿಗೂ ಕ್ಯಾರೆ ಎನ್ನದೇ ಹರೀಶ್ ಇಂಜಾಡಿ ನೇಮಕ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ನಾನು ಶಿಫಾರಸು ಪತ್ರ ಕೊಟ್ಟಿಲ್ಲ- ದಿನೇಶ್ ಗುಂಡೂರಾವ್
ಇನ್ನು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ರೌಡಿಶೀಟರ್ನನ್ನು ಅಧ್ಯಕ್ಷನಾಗಿ ನೇಮಕ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ , ಚುನಾವಣೆ ಮಾಡಿಕೊಂಡು ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಯಾವುದೇ ಶಿಫಾರಸು ಪತ್ರ ಕೊಟ್ಟಿಲ್ಲ. ಆಯ್ಕೆ ಆಗಿರುವ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಸ್ಥಳೀಯ ಮುಖಂಡರ ಅಭಿಪ್ರಾಯದ ಮೇರೆಗೆ ಆಯ್ಕೆ ಆಗಿದೆ. ಈಗ ಆಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಈಗ ಅಧ್ಯಕ್ಷರ ಬದಲಾವಣೆ ಆಗುವುದು ಕಷ್ಟ. ಒಂದು ಬಾರಿ ಚುನಾವಣೆ ಆದ ಮೇಲೆ ಸ್ಥಾನದಿಂದ ಕೆಳಗಿಳಿಸಲು ಆಗುವುದಿಲ್ಲ. ಆದರೂ ಕೂಡ ಈ ಬಗ್ಗೆ ಮುಜರಾಯಿ ಇಲಾಖೆ ಸಚಿವರ ಜೊತೆ ಮಾತನಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.