ಮಂಗಳೂರು,ಮೇ. 13 (DaijiworldNews/AK): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಂಜಾಬ್ನ ಆದಂಪುರ ವಾಯುನೆಲೆಗೆ ಭೇಟಿ ನೀಡಿ ವಾಯುಸೇನೆಯ ಯೋಧರು, ಸೇನಾಧಿಕಾರಿಗಳನ್ನು ಅಭಿನಂದಿಸಿ ಬೆನ್ನು ತಟ್ಟಿರುವುದು ʼಆಪರೇಷನ್ ಸಿಂಧೂರ್ʼ ಕಾರ್ಯಾಚರಣೆಯಲ್ಲಿ ದೇಶದ ಸೈನಿಕರ ಆತ್ಮಸ್ಥೈರ್ಯವನ್ನೇ ಇಮ್ಮಡಿಗೊಳಿಸುವ ಜತೆಗೆ ಪಾಕಿಸ್ತಾನಕ್ಕೂ ದೊಡ್ಡ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಪ್ರಧಾನಮಂತ್ರಿ ಮೋದಿ ಅವರು ದೇಶದ ಪ್ರಮುಖ ವಾಯುನೆಲೆಗೆ ಪಾಕಿಸ್ತಾನದ ವಿರುದ್ಧದದ ಸಂಘರ್ಷ ನಡೆಯುತ್ತಿರುವಾಗಲೇ ಭೇಟಿ ನೀಡಿರುವುದು ಗಮನಾರ್ಹ ಬೆಳವಣಿಗೆ. ಒಂದು ರೀತಿಯಲ್ಲಿ ದೇಶದ ನಾಯಕನೇ ಯುದ್ಧಭೂಮಿಯಲ್ಲಿ ಕಾಣಿಸಿಕೊಂಡು ಕಾರ್ಯಾಚರಣೆ ಮುಂಚೂಣಿಯಲ್ಲಿರುವ ನಮ್ಮ ಸೈನಿಕರು, ಸೇನಾಧಿಕಾರಿಗಳಿಗೆ ಮತ್ತಷ್ಟು ಧೈರ್ಯ, ಆತ್ಮಬಲವನ್ನು ತುಂಬಿದ್ದಾರೆ. ಓರ್ವ ಯೋಧನಿಗೆ ಶತ್ರುಗಳನ್ನು ಹಿಮ್ಮಟ್ಟಿಸುವ ವೇಳೆ ದೇಶದ ಆಡಳಿತದ ಚುಕ್ಕಾಣಿ ಹಿಡಿದ ನಾಯಕ ಬೆನ್ನುತಟ್ಟಿದಾಗ, ಆತನಿಗೆ ಸಿಗುವ ಹುಮ್ಮಸ್ಸು ಅಷ್ಟಿಷ್ಟಲ್ಲ. ಅದು ಆತನ ಧೈರ್ಯವನ್ನು ಇಮ್ಮಡಿಗೊಳಿಸುತ್ತದೆ, ಕರ್ತವ್ಯ ಪ್ರಜ್ಞೆ ಹೆಚ್ಚಿಸುತ್ತದೆ ಮತ್ತು ದೇಶಕ್ಕಾಗಿ ಇನ್ನಷ್ಟು ತ್ಯಾಗ ಮಾಡಲು ಪ್ರೇರೇಪಿಸುತ್ತದೆ ಎಂಬುವುದನ್ನು ಓರ್ವ ಸೈನಿಕನಾಗಿ ನಾನು ಸ್ಪಷ್ಟವಾಗಿ ಹೇಳಬಲ್ಲೆ ಎಂದು ಕ್ಯಾ. ಬ್ರಿಜೇಶ್ ಅಭಿಪ್ರಾಯಪಟ್ಟಿದ್ದಾರೆ.
"ಯುದ್ಧಭೂಮಿಯಲ್ಲಿ ತಮ್ಮ ಜೀವವನ್ನೇ ಮುಡುಪಾಗಿಟ್ಟು ಹೋರಾಡುವ ಯೋಧರ ಶೌರ್ಯ, ತ್ಯಾಗ ಮತ್ತು ಪರಿಶ್ರಮವನ್ನು ಗುರುತಿಸಿ ಗೌರವಿಸಿದಾಗ ಸೈನಿಕರ ಮತ್ತು ಸೇನೆಯ ಆತ್ಮವಿಶ್ವಾಸ ಮತ್ತಷ್ಟು ವೃದ್ದಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಸಶಸ್ತ್ರ ಪಡೆಗಳು ಮತ್ತಷ್ಟು ಬಲಶಾಲಿ ಮತ್ತು ಸನ್ನದ್ಧವಾಗಿದ್ದು, ವಿಶ್ವದಲ್ಲಿ ಶ್ರೇಷ್ಠ ಮಟ್ಟದಲ್ಲಿವೆ. ಆದಂಪುರ ವಾಯುನೆಲೆಗೆ ಭೇಟಿ ನೀಡುವ ಮೂಲಕ ಪ್ರಧಾನಮಂತ್ರಿಗಳು ವಾಯು ಯೋಧರಿಗೆ ಆತ್ಮಸ್ಥೈರ್ಯ ಹೆಚ್ಚಿಸಿದ್ದರೆ ಅತ್ತ, ಪಾಕಿಸ್ತಾನದಂತಹ ಶತ್ರುಗಳಲ್ಲಿ ನಡುಕ ಹುಟ್ಟಿಸಿದ್ದಾರೆ ಎಂದಿದ್ದಾರೆ.
ನಮ್ಮ ಸೇನಾ ಪಡೆಗಳು ವಿಶ್ವದ ಅತ್ಯುತ್ತಮ ಮಿಲಿಟರಿ ಸಾಧನಗಳನ್ನು ಹೊಂದಿದ್ದು, ಇದೀಗ ನಾವು ʼಆಪರೇಷನ್ ಸಿಂಧೂರ್ʼ ಮೂಲಕ ನಮ್ಮ ಮಿಲಿಟರಿ ಸಾಮರ್ಥ್ಯ, ಶಕ್ತಿ ಹಾಗೂ ತಂತ್ರಜ್ಞಾನವನ್ನು ಇಡೀ ಜಗತ್ತಿಗೆ ಸಾಬೀತುಪಡಿಸಿದ್ದೇವೆ. ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳ ಮೂಲಕ ರಕ್ಷಣಾ ವಲಯದಲ್ಲಿ ಸಾಧಿಸಲಾದ ಸ್ವದೇಶೀಕರಣ ಮತ್ತು ಆಧುನೀಕರಣದ ಒಂದು ಸ್ಪಷ್ಟ ಚಿತ್ರಣವನ್ನು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ವಿಶ್ವವು ಕಂಡಿದೆ. ಒಟ್ಟಾರೆ ಪ್ರಧಾನಮಂತ್ರಿಗಳ ಈ ಭೇಟಿಯಿಂದ ಸೈನಿಕರ ಮನೋಬಲ, ಆತ್ಮಸ್ಥೈರ್ಯ ಒಂದೆಡೆಯಾದ್ರೆ, ಪ್ರಧಾನಿಯವರಲ್ಲಿರುವ ರಾಷ್ಟ್ರಪ್ರೇಮ, ದೇಶದ ರಕ್ಷಣೆಯೆಡೆಗಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.