ಮಂಗಳೂರು, ಮೇ. 09 (DaijiworldNews/AK):ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆಯ ಬೇಡಿಕೆಗೆ ನನ್ನ ಅಭ್ಯಂತರವಿಲ್ಲ. ಯಾವುದೇ ತನಿಖೆಗೆ ಆಕ್ಷೇಪ ಇಲ್ಲ. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಹೊರ ಬರಬೇಕು. ಯಾರೇ ಕೊಲೆ ಮಾಡಿದ್ದರೂ ಕೂಡ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ನಡೆಯುತ್ತಿರುವ ತನಿಖೆ ತೃಪ್ತಿಕರವಾಗಿಲ್ಲ. ಕೃತ್ಯಕ್ಕೆ ಅಂತರರಾಷ್ಟ್ರೀಯ ಹಣ ಹರಿದಿದ್ದು, ತನಿಖೆ ಎನ್ಐಎಗೆ ಒಪ್ಪಿಸಬೇಕೆಂಬ ವಿಪಕ್ಷಗಳ ಬೇಡಿಕೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ನನಗೆ ರಾಜಕೀಯ ಮುಖ್ಯ ಅಲ್ಲ. ಆದರೆ ಇಂತಹ ಘಟನೆಗಳ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಶಾಂತಿ ಸೌಹಾರ್ದತೆ ಹಾಳಾಗಬಾರದು ಎನ್ನುವುದು ನನ್ನ ಉದ್ದೇಶ. ತಪ್ಪು ಮಾಡಿದವರನ್ನು ಬೆಂಬಲಿಸುವ ವ್ಯಕ್ತಿತ್ವ ನನ್ನದಲ್ಲ. ಅದರ ಬಗ್ಗೆ ನನ್ನ ಜಿಲ್ಲೆಯ ಕ್ಷೇತ್ರದ ಜನರಿಗೆ ಅರಿವಿದೆ. ಅಂದಿನ ಉದ್ವೇಗದ ವಾತಾವರಣದಲ್ಲಿ ಸೌಹಾರ್ದತೆಗೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ನನಗೆ ಸಿಕ್ಕ ಮಾಹಿತಿಯನ್ನು ಕ್ಷೇತ್ರದ ಜನರಿಗೆ ತಿಳಿಸಿದ್ದೇನೆ. ಅದು ನನ್ನ ಮತ್ತು ಜನರ ನಡುವಿನ ಸಂಬಂಧ. ಪೊಲೀಸರು ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮವಹಿಸಿದ್ದಾರೆ ಎಂದರು.
ಈ ವಿಷಯದಲ್ಲಿ ಟೀಕೆ ಮಾಡುವವರು, ರಾಜಕೀಯ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಆರೋಪ, ಟೀಕೆಗಳು ನನಗೆ ಹೊಸತೇನು ಅಲ್ಲ ಎಂದು ಹೇಳಿದರು.