ಕುಂದಾಪುರ, ಮೇ. 09 (DaijiworldNews/TA): ತ್ರಾಸಿ - ಮರವಂತೆ ಕಡಲ ತೀರಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗುರುವಾರ ಭೇಟಿ ನೀಡಿದರು.




ಈ ವೇಳೆ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಪೂರಕ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ರಾಜ್ಯ ಸರಕಾರದಿಂದ ಪ್ರಸ್ತಾವನೆ ಬಂದ ಬಳಿಕ ಕೇಂದ್ರ ಸರಕಾರ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೊಲ್ಲೂರು ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ಸುಮಾರು ಒಂದು ತಿಂಗಳ ಹಿಂದೆ ಶಾಸಕರು ಹಾಗೂ ಮುಖಂಡರೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು. ಈ ಬಗ್ಗೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಲಾಗಿತ್ತು. ಕೇಂದ್ರ ಸರಕಾರದ ಸಾಸಿ ಯೋಜನೆಯಡಿ ಪಡುವರಿ-ಸೋಮೇಶ್ವರ, ಮರವಂತೆ ಹಾಗೂ ಕೊಲ್ಲೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅನುದಾನಕ್ಕೆ ಪ್ರಸ್ತಾವನೆ ನೀಡಲಾಗಿತ್ತು. ಸ್ವತ: ಸಚಿವರೇ ಈ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿರುವುದರಿಂದ ಈ ಭಾಗಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬರುವ ನಿರೀಕ್ಷೆ ಇಟ್ಟಿಕೊಂಡಿದ್ದೇವೆ ಎಂದರು.
ಈ ವೇಳೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ, ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ಪ್ರವಾಸೋದ್ಯಮ ಇಲಾಖೆ ಕಮೀಷನರ್ ರಾಜೇಂದ್ರ ಕೆ.ವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.