ಉಡುಪಿ, ಮೇ. 08 (DaijiworldNews/TA): ಕಾರ್ಕಳ ವಿಧಾನಸಭಾಕ್ಷೇತ್ರದ ಜನಾಕರ್ಷಕ ಕೇಂದ್ರವನ್ನು ಗುರುತಿಸಿ ಅದೆಲ್ಲವನ್ನೂ ಅಭಿವೃದ್ಧಿಪಡಿಸುವುದಕ್ಕೆ ಶಾಸಕ ವಿ. ಸುನಿಲ್ ಕುಮಾರ್ ಅವರು ಕಳೆದ ಆರು ತಿಂಗಳ ಹಿಂದೆ ದೆಹಲಿಗೆ ಆಗಮಿಸಿ ವರದಿಯನ್ನು ಒಪ್ಪಿಸಿ ಮನವಿ ಮಾಡಿಕೊಂಡಿದ್ದರು.





ಆ ಎಲ್ಲ ಸಮಗ್ರ ಮಾಹಿತಿಗಳ ಆಧಾರದ ಮೇಲೆ ಸ್ವದೇಶ್ ದರ್ಶನ್ ಯೋಜನೆಯಲ್ಲಿ 116 ಕೋಟಿ ರೂ. ಅನುದಾನವನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರು ಮಾಡಿಸುವ ಚಿಂತನೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು.
ಅವರು ಕಾರ್ಕಳದ ಆನೆಕೆರೆ ಪ್ರವಾಸಿ ಧಾಮದಲ್ಲಿರುವ ಕೆರೆ ಬಸದಿಗೆ ಭೇಟಿ ನೀಡಿ ನಾಲ್ಕು ತೀರ್ಥಂಕರ ಮಹಾಸ್ವಾಮಿಗಳ ಮೂರ್ತಿ ದರ್ಶನ ಮಾಡಿದ ನಂತರ ಮಾತನಾಡಿದರು. ಶೇಖಾವತ್ ಅವರು ಇಂದು ಕಾರ್ಕಳದ ಐತಿಹಾಸಿಕ ಆನೆಕೆರೆ ಮತ್ತು ರಾಮಸಮುದ್ರಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ರಾಮಸಮುದ್ರದ ಸಮಗ್ರ ಅಭಿವೃದ್ಧಿ ಸೇರಿದಂತೆ ಆನೆಕೆರೆ ಚತುರ್ಮುಖ ಕೆರೆ ಬಸದಿ ಹಾಗೂ ವರಂಗ ಚತುರ್ಮುಖ ಕೆರೆ ಬಸದಿಯನ್ನು ಪ್ರವಾಸೋಧ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸುವ ಬಗ್ಗೆ ವಿಶೇಷ ಅನುದಾನ ಬಿಡುಗಡೆಗೆ ಮನವಿ ಮಾಡಲಾಯಿತು. ಈ ವೇಳೆ ಶಾಸಕ ಸುನಿಲ್ ಕುಮಾರ್, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ ಕುಮಾರ್, ಮಹಾವೀರ್ ಜೈನ್, ಬಿಜೆಪಿ ಕಾರ್ಕಳ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.