ಮಂಗಳೂರು,ಮೇ. 07 (DaijiworldNews/AK):ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ವಿಷಯಗಳನ್ನು ಹರಡುವವರು ತಮ್ಮ ಹೆತ್ತವರ ಗೌರವ ಉಳಿಸುವತ್ತ ಯೋಚನೆ ಮಾಡಬೇಕು. ಪ್ರಚೋದನಕಾರಿ, ಕೆಟ್ಟ ಸಂದೇಶಗಳನ್ನು ಬರೆದು ಪ್ರಕರಣ ದಾಖಲಿಸಿಕೊಂಡಾಗ ಅದರಿಂದ ತೊಂದರೆಗೊಳಗಾಗುವುದು ಹೆತ್ತವರು ಎಂಬುದನ್ನು ಮರೆಯಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಬರೆಯುವ ಸಂದೇಶಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾನೂನು ಕ್ರಮ ವಹಿಸುತ್ತದೆ. ಆದರೆ ಈ ರೀತಿಯಲ್ಲಿ ವರ್ತಿಸುವವರು ತಮ್ಮ ಹೆತ್ತವರ ಬಗ್ಗೆ ಆಲೋಚನೆ ಮಾಡಬೇಕು. ಅವರ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದರು.
ದ.ಕ. ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಕರಾವಳಿ ಶಾಸಕರ ಜೊತೆ ಸಮಾಲೋಚನೆ ನಡೆಸಿ ಮಾಸ್ಟರ್ ಪ್ಲಾನ್ ತಯಾರಾಗುತ್ತಿರುವ ಹೊತ್ತಿನಲ್ಲಿಯೇ ಕಳೆದ 10ರಿಂದ 12 ದಿನಗಳಿಂದೀಚೆಗೆ ಜಿಲ್ಲೆಗೆ ಕಪ್ಪು ಚುಕ್ಕೆ ತರುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.