ಉಡುಪಿ, ಮೇ. 07 (DaijiworldNews/AA): ಪಾಕಿಸ್ತಾನದಲ್ಲಿನ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿ ಭಾರತೀಯ ಸೇನೆಯು ಕೈಗೊಂಡ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯನ್ನ ಶಾಸಕ ಸುನಿಲ್ ಕುಮಾರ್ ಶ್ಲಾಘಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಸೇನೆಯು 'ಆಪರೇಷನ್ ಸಿಂಧೂರ್' ಅಡಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿದೆ. ಈ ದಿಟ್ಟ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ಭಾರತದ 150 ಕೋಟಿ ನಾಗರಿಕರು ಭಾರತೀಯ ಸೇನೆಯೊಂದಿಗೆ ನಿಂತು ಅವರ ಈ ಕಾರ್ಯಾಚರಣೆಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಗಡಿಯಾಚೆಯಿಂದ ಹುಟ್ಟಿಕೊಳ್ಳುವ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭಾರತೀಯ ಸೇನೆಯ ಈ ಕಾರ್ಯಾಚರಣೆಯು ಒಂದು ನಿರ್ಣಾಯಕ ಹೆಜ್ಜೆಯಾಗಿದೆ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಬೆದರಿಕೆಯನ್ನು ತೊಡೆದುಹಾಕಲು ಭಾರತೀಯ ಸೇನೆಯು ಮಹತ್ವದ ಕ್ರಮ ಕೈಗೊಂಡಿದೆ. ಸ್ವಾತಂತ್ರ್ಯ ದೊರೆತ ನಂತರ ನಮ್ಮನ್ನು ಕಾಡುತ್ತಿರುವ ಭಯೋತ್ಪಾದನೆಗೆ ಈ ಕಾರ್ಯಾಚರಣೆಯು ಅಂತಿಮ ಹೊಡೆತವಾಗಬೇಕು. ನಮ್ಮ ಪಡೆಗಳಿಗೆ ಪ್ರತಿಯೊಬ್ಬರೂ ಸಹಕರಿಸಬೇಕು ಮತ್ತು ಬೆಂಬಲಿಸಬೇಕು ಎಂದರು.
ನಿನ್ನೆ ತಡರಾತ್ರಿ ಭಾರತೀಯ ವಾಯುಸೇನೆಯು ನಡೆಸಿದ ವೈಮಾನಿಕ ದಾಳಿಗಳ ಕುರಿತು ಮಾತನಾಡಿದ ಸುನಿಲ್ ಕುಮಾರ್, ಇದನ್ನು ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಚಟುವಟಿಕೆಗೆ ನೀಡಲಾದ ದಿಟ್ಟ ಪ್ರತಿಕ್ರಿಯೆ. ಈ ಕಾರ್ಯಾಚರಣೆಯಲ್ಲಿ ನೂರಾರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಮತ್ತು ಇಂತಹ ಹೊಡೆತವು ಪಾಕಿಸ್ತಾನದಿಂದ ಮತ್ತಷ್ಟು ದುಷ್ಕೃತ್ಯಗಳನ್ನು ತಡೆಯುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ದೇಶವು ಈಗ ಯುದ್ಧದಂತಹ ಪರಿಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ, ದೇಶದೊಳಗಿನ ಕೆಲ ವಿಚ್ಛಿದ್ರಕಾರಿ ಮನಸ್ಸುಗಳು ವಿಷಕಾರಿ ಕೃತ್ಯಗಳನ್ನು ಎಸಗಲು ಪ್ರಯತ್ನಿಸಬಹುದು. ನಾಗರಿಕರು ಎಚ್ಚರಿಕೆಯಿಂದ ಇರಬೇಕು, ಕೇಂದ್ರ ಸರ್ಕಾರವು ನೀಡುವ ಭದ್ರತಾ ಸಲಹೆಗಳನ್ನು ಪಾಲಿಸಬೇಕು ಮತ್ತು ರಾಷ್ಟ್ರದ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಒಗ್ಗಟ್ಟಾಗಿರಬೇಕು ಎಂದು ಮನವಿ ಮಾಡಿದರು.