ಮಂಗಳೂರು, ಮೇ. 06 (DaijiworldNews/AK):ಕರಾವಳಿ ನಗರದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ, ಪ್ರತೀಕಾರವನ್ನು ಸೂಚಿಸುವ ಮತ್ತು ಕೋಮು ಸಾಮರಸ್ಯವನ್ನು ಕದಡುವ ಬೆದರಿಕೆ ಹಾಕುವ ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದ ಆರೋಪದ ಮೇಲೆ ಮಂಗಳೂರು ನಗರ ಪೊಲೀಸರು ಇನ್ಸ್ಟಾಗ್ರಾಮ್ ಬಳಕೆದಾರರ ವಿರುದ್ಧ ಎರಡು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.

ಮೊದಲ ಪ್ರಕರಣವನ್ನು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 69/2025 ರ ಅಡಿಯಲ್ಲಿ ದಾಖಲಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353(1) ಮತ್ತು 353(2) ರ ಅಡಿಯಲ್ಲಿ ದಾಖಲಿಸಲಾಗಿದೆ.
ಈ ಪ್ರಕರಣದ ಆರೋಪಿಗಳು _dj_bharath_2008 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೋಮು ಉದ್ವಿಗ್ನತೆಗಳಿಗೆ ಪ್ರತಿಕ್ರಿಯೆಯಾಗಿ ಸೇಡು ತೀರಿಸಿಕೊಳ್ಳಲು ಕರೆ ನೀಡುವ ಪ್ರಚೋದನಕಾರಿ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ಇನ್ಸ್ಟಾಗ್ರಾಮ್ ಖಾತೆಯಲ್ಲಿ "ಸುಹಾಸ್ ಅಣ್ಣನ ಕೊಂದವರು ಹಾಗೂ ಕೊಂದವರಿಗೆ ಸಹಾಯ ಮಾಡಿದವರೆಲ್ಲರ ರಕ್ತ ಹರಿಯಬೇಕು ಆಗ ಮಾತ್ರ ಸುಹಾಸ್ ಅಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತೆ ನೆನಪಿಟ್ಟುಕೊಳ್ಳಿ " ಎಂಬುವುದಾಗಿ ಪೋಸ್ಟ್ ಮಾಡಿದ್ದು, ಪೋಸ್ಟ್ ಗೆ ಲೈಕ್ ಮಾಡಿದ್ದ ಶರಣಪ್ಪ ಬಸವರಾಜು ಬಿಂಗಿ ಬಿಜೈ ಎಂಬುವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದೆ.
ಎರಡನೇ ಮತ್ತು ಪ್ರತ್ಯೇಕ ಪ್ರಕರಣದಲ್ಲಿ, ಪೊಲೀಸರು karavali_official ಬಳಕೆದಾರರ ವಿರುದ್ಧ IPC ಸೆಕ್ಷನ್ 196, 353(2), ಮತ್ತು 351(3) ಅನ್ನು ಉಲ್ಲೇಖಿಸಿ ಅಪರಾಧ ಸಂಖ್ಯೆ 86/2025 ರ ಅಡಿಯಲ್ಲಿ FIR ದಾಖಲಿಸಿದ್ದಾರೆ.
ಪೋಸ್ಟ್ ನಲ್ಲಿ "ಹೋರಾಟ ಇನ್ನೂ ಮುಗಿದಿಲ್ಲ. ಪ್ರತಿಕ್ರಿಯೆ ನೆನಪಿನಲ್ಲಿ ಉಳಿಯುತ್ತದೆ. targe 6 peace baki inshallah ಎಂಬುವುದಾಗಿ ಪೋಸ್ಟ್ ಮಾಡಿದ್ದು, ಪೋಸ್ಟ್ಗೆ ಲೈಕ್ ಮಾಡಿದ್ದ ಶಹನಾಜ್ ಬಜ್ಪೆ ಎಂಬವನನ್ನು ವಿಚಾರಣೆ ನಡೆಸುತ್ತಿದ್ದು, ತನಿಖೆ ನಡೆಯುತ್ತಿದೆ.