ಮಂಗಳೂರು, ಮೇ. 03 (DaijiworldNews/TA): ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ (DKDBA) ಆಯೋಜಿಸಿದ್ದ ಒಂದು ತಿಂಗಳ ಉಚಿತ ಬೇಸಿಗೆ ಬ್ಯಾಡ್ಮಿಂಟನ್ ತರಬೇತಿ ಶಿಬಿರ 2025 ರ ಸಮಾರೋಪ ಸಮಾರಂಭವು ಮೇ 3 ರ ಶನಿವಾರ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ದ.ಕ. ಜಿಲ್ಲಾ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷ ಸಿಎ ಶಾಂತಾರಾಮ್ ಶೆಟ್ಟಿ, ತರಬೇತುದಾರರು ಮತ್ತು ಪೋಷಕರು ಮಕ್ಕಳಿಗೆ ನಿಜವಾದ ಪ್ರೇರಕರು. ಐಪಿಎಲ್ನಲ್ಲಿ 14 ವರ್ಷ ವಯಸ್ಸಿನವರ ಸಾಧನೆಗಳಿಂದ ನಾವು ಇದನ್ನು ಸ್ಪಷ್ಟವಾಗಿ ನೋಡಬಹುದು. ನಿಯಮಿತ ಅಭ್ಯಾಸದ ರೂಢಿ ಬೆಳೆಸಿಕೊಳ್ಳುವುದು ಮತ್ತು ಸ್ಥಿರವಾದ ಗುರಿ ಹೊಂದುವುದು ಅತ್ಯಗತ್ಯ. ಅದೇ ಸಮಯದಲ್ಲಿ, ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಗಳ ಮೇಲೆ ಕೂಡ ಹೆಚ್ಚಿನ ಗಮನ ಹರಿಸಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ'ಸೋಜಾ ಮಾತನಾಡಿ, ಈ ಶಿಬಿರವು ಬ್ಯಾಡ್ಮಿಂಟನ್ ಕಲಿಸುವುದಲ್ಲದೆ, ಉಚಿತ ತರಬೇತಿ ಶಿಬಿರದಲ್ಲಿ ಭಾಗವಹಿಸುವವರ ಒಟ್ಟಾರೆ ಅಭಿವೃದ್ಧಿಗೆ ಬೆಂಬಲ ನೀಡುವ ವಿವಿಧ ರೀತಿಯ ತರಬೇತಿ ಸಹ ಒದಗಿಸಿದೆ ಎಂದರು. ಬೇಸಿಗೆ ಶಿಬಿರದಲ್ಲಿ ನಡೆದ ಸ್ಪರ್ಧೆಗಳಲ್ಲಿ ಬಾಲಕ ಮತ್ತು ಬಾಲಕಿಯರ ಹೈಯರ್ ಬಿಗಿನರ್, ಬಾಲಕ ಮತ್ತು ಬಾಲಕಿಯರ ಇಂಟರ್ಮೀಡಿಯೇಟ್, ಬಾಲಕ ಮತ್ತು ಬಾಲಕಿಯರ ಲೋವರ್ ಬಿಗಿನರ್ ವಿಭಾಗದಲ್ಲಿ ಬಹುಮಾನ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ DKDBA ಕಾರ್ಯದರ್ಶಿ ಆರ್ ಶ್ರೀನಿವಾಸ್ ಬಾಳಿಗಾ, ಉಪಾಧ್ಯಕ್ಷ ಇವಾನ್ ಆಲ್ಫ್ರೆಡ್ ಪತ್ರಾವೊ, ಜಂಟಿ ಕಾರ್ಯದರ್ಶಿ ಎ ಎಸ್ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಏಪ್ರಿಲ್ 1 ರಿಂದ 30 ರವರೆಗೆ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ 100 ಕ್ಕೂ ಹೆಚ್ಚು ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರರು ಪಾಲ್ಗೊಂಡಿದ್ದರು. ಸ್ಟೀಫನ್ ಫ್ರಾಂಕ್ ಮತ್ತು ದೀಕ್ಷಿತ್ ಅವರ ನೇತೃತ್ವದಲ್ಲಿ ಉಚಿತ ತರಬೇತಿ ನೀಡಲಾಗಿತ್ತು.