ಮಂಗಳೂರು, ಮೇ. 03 (DaijiworldNews/AA): ದುರಸ್ತಿ ಕಾರ್ಯಕ್ಕಾಗಿ ಒಂದು ತಿಂಗಳ ಕಾಲ ಮುಚ್ಚಲಾಗಿದ್ದ ಉಳ್ಳಾಲ ನೇತ್ರಾವತಿ ಹಳೆಯ ಸೇತುವೆಯನ್ನು ಶನಿವಾರ ಬೆಳಿಗ್ಗೆ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಈ ಹಿನ್ನೆಲೆ ಸಾರ್ವಜನಿಕರು ಕೊಂಚ ನಿರಾಳವಾಗಿದ್ದಾರೆ.

ಉಳ್ಳಾಲದಿಂದ ಮಂಗಳೂರು ಸಂಪರ್ಕಿಸುವ ನೇತ್ರಾವತಿಯಲ್ಲಿ ಎರಡು ಸೇತುವೆಗಳಿವೆ. ಅದರಲ್ಲಿ ಒಂದು ಸೇತುವೆಯನ್ನು ಏಪ್ರಿಲ್ 1 ರಿಂದ ದುರಸ್ತಿಗಾಗಿ ಮುಚ್ಚಲಾಗಿತ್ತು. ಆ ಸಮಯದಲ್ಲಿ ಹೊಸ ಸೇತುವೆಯ ಒಂದು ಬದಿ ಮಾತ್ರ ಸಂಚಾರಕ್ಕೆ ಲಭ್ಯವಿತ್ತು. ಇದರಿಂದಾಗಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ವಿಶೇಷವಾಗಿ ಕೇರಳ ಮತ್ತು ಮಂಗಳೂರು ನಡುವೆ ಸಂಚರಿಸುವ ವಾಹನಗಳಿಗೆ ತೊಂದರೆಯಾಗಿತ್ತು.
ಪುನಃ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದರಿಂದ, ಎರಡೂ ಸೇತುವೆಗಳು ಈಗ ಕೇರಳ ಮತ್ತು ಮಂಗಳೂರು ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ಲಭ್ಯವಿದೆ. ಇದರಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಸಹಾಯವಾಗುತ್ತದೆ. ಕಳೆದ ಒಂದು ತಿಂಗಳಿನಿಂದ ಪ್ರಯಾಣಿಕರು ಮತ್ತು ವಾಹನ ಚಾಲಕರು ಎದುರಿಸುತ್ತಿರುವ ತೊಂದರೆಗಳು ಅಂತ್ಯವಾಗಿದೆ.