ಮಂಗಳೂರು, ಏ.30(DaijiworldNews/TA): ನಗರದ ಹೊರವಲಯದ ಕುಡುಪು ಸಮೀಪ ಎ.27ರಂದು ದುಷ್ಕರ್ಮಿಗಳ ಗುಂಪೊಂದು ವಲಸೆ ಕಾರ್ಮಿಕನೋರ್ವನನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಆರೋಪದ ಮೇರೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್ ರವರನ್ನು ಅಮಾನತುಗೊಳಿಸುವಂತೆ ಗೃಹ ಸಚಿವ ಜಿ ಪರಮೇಶ್ವರ್ ರವರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಆಗ್ರಹಿಸಿದ್ದಾರೆ.

ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಸ್ಥಿತಿಯಲ್ಲಿ ಮೃತ ಶರೀರವು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಮೃತ ದೇಹದ ಮೇಲೆ ಯಾರೋ ಹಲ್ಲೆ ನಡೆಸಿ ಗಂಭೀರ ಗಾಯಗಳು ಉಂಟಾಗಿರುವುದು ಕಂಡು ಬಂದರೂ ಸಹ ಪೊಲೀಸ್ ನಿರೀಕ್ಷಕರು ಕೂಡಲೇ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳದೇ ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶ ಕೊಲೆ ಪ್ರಕರಣವನ್ನು ಯುಡಿಆರ್ ಪ್ರಕರಣವೆಂದು ದಾಖಲಿಸಿಕೊಂಡಿರುವ ಬಗ್ಗೆ, ಉಸ್ತುವಾರಿ ಸಚಿವರಿಗೆ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಚಿತ್ರಾಪುರ ದೂರು ಸಲ್ಲಿಸಿದ್ದರು, ಈ ಹಿನ್ನೆಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಕೋರಲಾಗಿದೆ.