ಉಡುಪಿ, ಏ.29 (DaijiworldNews/AA): ಉದ್ಯಮಿ ದಿಲೀಪ್ ಎನ್ ಆರ್ ಅವರು ವಿಷವನ್ನು ಸೇವನೆ ಮಾಡಿ ತದನಂತರ ಲೈಸನ್ಸ್ ಇರುವ ಸರ್ವಿಸ್ ಪಿಸ್ತೂಲ್ ನಲ್ಲಿ ಎದೆಯ ಭಾಗಕ್ಕೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.

ಉದ್ಯಮಿ ದಿಲೀಪ್ ಅವರ ಆತ್ಮಹತ್ಯೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಕಳದಲ್ಲಿ ಅನಯಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. ಮಂಗಳೂರಿನ ಉದ್ಯಮಿ ದಿಲೀಪ್ ಎನ್ ಆರ್ ಗೆ ಆರ್ಥಿಕ ನಷ್ಟವಾಗಿತ್ತು ಎಂಬ ಮಾಹಿತಿಯಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಕುಟುಂಬದಿಂದ ಸಿಕ್ಕಿದೆ. ಆತ್ಮಹತ್ಯೆಗೆ ಮುನ್ನ ಕುಟುಂಬಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸಂದೇಶ ರವಾನಿಸಿದ್ದಾರೆ. ಕುಟುಂಬಸ್ಥರು ರಾತ್ರಿಯೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಪೊಲೀಸರು ಕಾರನ್ನು ಹುಡುಕಿ ಪತ್ತೆ ಮಾಡಿದ್ದಾರೆ. ಕಾರ್ಕಳದ ನಿಟ್ಟೆ ಬಳಿ ಬೆಳಗಿನ ಜಾವ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ವಿಷದ ಬಾಟಲ್ ಮತ್ತು ಸರ್ವಿಸ್ ರಿವಾಲ್ವಾರ್ ಕಾರಿನೊಳಗೆ ಪತ್ತೆಯಾಗಿದೆ.ಅವರು ವಿಷವನ್ನು ಸೇವಿಸಿ ಬಳಿಕ ಸರ್ವಿಸ್ ಪಿಸ್ತೂಲ್ ನಲ್ಲಿ ಶೂಟ್ ಮಾಡಿಕೊಂಡಿರುತ್ತಾರೆ. ಈ ಸಂಬಂಧ ಕುಟುಂಬಿಕರು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ನಂತರ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ ಎಂದು ಹೇಳಿದರು.