ಮಂಗಳೂರು, ಏ.25 (DaijiworldNews/AA): ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್ ಹಾಕಿದ್ದ 'ನಿಚ್ಚು ಮಂಗಳೂರು' ಎಂಬ ಫೇಸ್ಬುಕ್ ಪೇಜ್ ವಿರುದ್ಧ ಪ್ರಕರಣ ದಾಖಲಾಗಿದೆ.

ಉಳ್ಳಾಲದ ಸತೀಶ್ ಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 ಮತ್ತು 353(1)(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್ಬುಕ್ ಪೇಜ್ನ ಡಿಪಿಯಲ್ಲಿರುವ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ ಎನ್ನಲಾದ ಆರೋಪಿಯು, ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ಅಮಾನವೀಯ ಕೃತ್ಯವನ್ನು ಸಮರ್ಥಿಸಿ ಪೋಸ್ಟ್ ಮಾಡಿದ್ದ ಎನ್ನಲಾಗಿದೆ. ನಿಚ್ಚು ಮಂಗಳೂರು ಎಂಬ ಫೇಸ್ಬುಕ್ ಪೇಜ್ನಲ್ಲಿ, '2023ರಲ್ಲಿ ಮಹಾರಾಷ್ಟ್ರದ ಪಾಲ್ಗರ್ನಲ್ಲಿ ಮೂವರು ಮುಸ್ಲಿಮರನ್ನು ಕೊಲ್ಲಲಾಗಿತ್ತು. ಆರೋಪಿ ಚೇತನ್ ಸಿಂಗ್ಗೆ ಸಾರ್ವಜನಿಕವಾಗಿ ನೇಣಿಗೆ ಹಾಕಲಿಲ್ಲ. ಪಾಲ್ಗರ್ ಘಟನೆ ಕಾರಣಕ್ಕೆ ಕಾಶ್ಮೀರದಲ್ಲಿ ಧರ್ಮ ಕೇಳಿ ಉಗ್ರರು ಹತ್ಯೆ ಮಾಡಿದ್ದಾರೆ' ಎಂದು ಪೋಸ್ಟ್ ಹಾಕಲಾಗಿದೆ. ಪಾಲ್ಗರ್ ಘಟನೆಗೆ ಪ್ರತೀಕಾರವಾಗಿ ಧರ್ಮದ ಆಧಾರದ ಮೇಲೆ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯನ್ನು ನಡೆಸಲಾಗಿದೆ ಎಂದು ಫೇಸ್ಬುಕ್ ಪೋಸ್ಟ್ ಸೂಚಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಇಂತಹ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿ ಪೋಸ್ಟ್ ಮಾಡಿರುವುದಕ್ಕೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, 'ನಿಚ್ಚು ಮಂಗಳೂರು' ಪುಟವನ್ನು ನಿರ್ವಹಿಸುತ್ತಿರುವ ವ್ಯಕ್ತಿಯನ್ನು ಗುರುತಿಸಿ ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ.