ಕುಂದಾಪುರ, ಏ.25 (DaijiworldNews/AA): ಇದುವರೆಗೂ ಸರ್ಕಾರಿ ದಾಖಲೆಗಳಲ್ಲಿ ಗುರುತಿಸಲ್ಪಡದ ರಾಜ್ಯದಲ್ಲಿ ಸುಮಾರು 4-5 ಲಕ್ಷದಷ್ಟು ಮತ್ತು ಉಡುಪಿ ಜಿಲ್ಲೆಯಲ್ಲಿ ಜನಸಂಖ್ಯೆ ಹೊಂದಿರುವ ಸುಮಾರು 25 ಸಾವಿರ ವೈಶ್ಯವಾಣಿ ಸಮಾಜವನ್ನು ಪ್ರವರ್ಗ 2ಡಿ ಕೆಟಗರಿಯಲ್ಲಿ ದಾಖಲು ಮಾಡುವಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ನಿರ್ಣಯಗಳನ್ನು ಗಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ವೈಶ್ಯವಾಣಿ ಸಮಾಜದ ಮುಖಂಡ ಸುಭಾಶ್ಚಂದ್ರ ಶೇಟ್ ಆಗ್ರಹಿಸಿದ್ದಾರೆ.

ಕುಂದಾಪುರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಶ್ಯವಾಣಿ ಸಮಾಜವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತುಂಬಾ ಹಿಂದುಳಿದಿದೆ. ಈ ತನಕ ಸರಕಾರದ ದಾಖಲೆಗಳಲ್ಲಿ ವೈಶ್ಯವಾಣಿ ಜಾತಿ ನಮೂದಿಸಿಲ್ಲ. ಕಳೆದ 30 ವರ್ಷಗಳಿಂದ ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸುತ್ತಾ ಬಂದಿದ್ದು, ಈವರೆಗೆ ಆಗಿಲ್ಲ ಎಂದರು.
ಈ ಹಿಂದೆ 2013ರಲ್ಲಿ ಶಂಕ್ರಪ್ಪ ನೇತೃತ್ವದ ಜಾತಿ ಗಣತಿ ವರದಿ ಆಯೋಗವು ವೈಶ್ಯವಾಣಿ ಸಮಾಜವನ್ನು ಪ್ರವರ್ಗ 3ಬಿ ಅಡಿಯಲ್ಲಿ ಸೇರ್ಪಡೆಗೊಳಿಸಲು ಸಲಹೆ ನೀಡಿತ್ತು. ಕಳೆದ ವರ್ಷ ಸರಕಾರ ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆಗೊಳಿಸಿ ೨೦೨೩ರಲ್ಲಿ ಹೊರಡಿಸಿದ ಸರ್ಕಾರಿ ಆದೇಶ ಜಾರಿಗೆ ಬಾರದಿರುವುದರಿಂದ ವೈಶ್ಯವಾಣಿ ಸಮುದಾಯದ ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳಿಗೆ ಸೂಕ್ತ ಜಾತಿ ಪ್ರಮಾಣ ಪತ್ರ ಸಿಗದೇ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಅಲ್ಲದೆ ಸರಕಾರದ ಸವಲತ್ತುಗಳನ್ನು ಪಡೆಯಲು ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಲಾಗಿದ್ದು, ಸ್ಥಳೀಯ ಶಾಸಕರು ಹಾಗೂ ಸಂಸದರನ್ನು ಭೇಟಿ ಮಾಡಿ ಆದಷ್ಟು ಶೀಘ್ರ ವೈಶ್ಯವಾಣಿ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರ್ಪಡೆಗೊಳಿಸುವ ಗೆಜಟ್ ನೋಟಿಫಿಕೇಶನ್ ಹೊರಡಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.