ಕಾಸರಗೋಡು, ಜೂ 15: (Daijiworld News/SM): ಉಪ್ಪಳದ ಮುಸೋಡಿಗೆ ಕೇರಳ ಕಂದಾಯ ಸಚಿವ ಚಂದ್ರಶೇಖರನ್ ಶನಿವಾರ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂತ್ರಸ್ಥರನ್ನು ವಿಶೇಷ ಕೇಂದ್ರ ತೆರೆದು ಸ್ಥಳಾಂತರ ಸೇರಿದಂತೆ ಅಗತ್ಯ ತುರ್ತು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಆದೇಶ ನೀಡಿದರು. ಕಡಲ್ಕೊರೆತ ತಡೆಗೆ ತೀರದಲ್ಲಿ ಜಿಯೋ ಬ್ಯಾಗ್ ಸೇರಿದಂತೆ ತಾತ್ಕಾಲಿಕ ಪ್ರತಿರೋಧ ವ್ಯವಸ್ಥೆ ಕೈಗೊಳ್ಳಲಾಗುವುದು. ಇದಕ್ಕಾಗಿ ಜಿಲ್ಲೆಗೆ ಒಂದು ಕೋಟಿ ರೂಪಾಯಿ ಒದಗಿಸಲಾಗುವುದು. ೧೨ ಕೋಟಿ ರೂಪಾಯಿಗಳ ಯೋಜನೆಯನ್ನು ತಯಾರಿಸಲಾಗುತ್ತಿದ್ದು, ಇದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸಚಿವರು ಹೇಳಿದರು.
ಸ್ಥಳ ಮತ್ತು ಮನೆ ಕಳೆದುಕೊಂಡವರಿಗೆ ಮೂರು ಸೆಂಟ್ಸ್ ಸ್ಥಳ ಖರೀದಿಸಲು ಆರು ಲಕ್ಷ ರೂಪಾಯಿ ಮೀನುಗಾರಿಕಾ ಇಲಾಖೆ ಒದಗಿಸಲಿದೆ. ಮನೆ ನಿರ್ಮಾಣಕ್ಕೆ ಮುಖ್ಯಮಂತ್ರಿಯವರ ದುರಂತ ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿಯನ್ನು ಒದಗಿಸಲಾಗುವುದು. ಕಡಲ್ಕೊರೆತ ಉಂಟಾಗುವ ಸ್ಥಳದಿಂದ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಹಾಗೂ ಉತ್ತಮ ಆಹಾರ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗೆ ಆದೇಶ ನೀಡಿದರು.
ಸಂತ್ರಸ್ಥ ಕೇಂದ್ರಗಳಲ್ಲಿ ವಾಸಿಸುವವರ ಆರೋಗ್ಯ ಸುರಕ್ಷೆ ಕಾಪಾಡಲು ಹಾಗೂ ಖಾತರಿಪಡಿಸಲು ವೈದ್ಯಕೀಯ ಶಿಬಿರ ನಡೆಸಲು ಆರೋಗ್ಯ ಇಲಾಖೆಗೆ ಆದೇಶ ನೀಡಿದರು .