ಮಂಗಳೂರು, ಜೂ 15 (Daijiworld News/MSP): ನಟೋರಿಯಸ್ ಅಂಡರ್ ವಲ್ಡ್ ರೌಡಿ , ಹಲವು ಪ್ರಕರಣಗಳ ಆರೋಪಿ ಅಶ್ಗರ್ ಆಲಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2 ಕೊಲೆ ಪ್ರಕರಣ ಸೇರಿದಂತೆ 9 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತ 2007 ರಲ್ಲಿ ನಕಲಿ ಪಾಸ್ ಪೋರ್ಟ್ ಬಳಸಿ ದುಬೈಗೆ ಪಲಾಯಗೈದು ತಲೆಮರೆಸಿಕೊಂಡಿದ್ದ. ವಿದೇಶದಿಂದ ಊರಿಗೆ ಮರಳಿ ಕೇರಳದ ಉಪ್ಪಳದಲ್ಲಿ ಈತ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕಂಕನಾಡಿ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ಹಾಗೂ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ಯಾಮಸುಂದರ್ ಅವರನ್ನೊಳಗೊಂಡ ತಂಡ ಭೂಗತ ಪಾತಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಬೈನಲ್ಲಿ ಈತ ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ವಿವರವಾದ ವಿಚಾರಣೆ ನಡೆಯಲಿದೆ.
ಭೂಗತ ಪಾತಕಿಯನ್ನು ದುಬೈಗೆ ಪಲಾಯನ ಮಾಡಲು ನಕಲಿ ಪಾಸ್ ಪೋರ್ಟ್ ನೀಡಿ ಸಹಕರಿಸಿದ ನವಾಜ್ ಮತ್ತು ರಶೀದ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಇವರಿಬ್ಬರು ನಕಲಿ ಪಾಸ್ ಪೋರ್ಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದು ಈ ಸಂಬಂಧ ಹೆಚ್ಚಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಆರೋಪಿ ಭಾಗಿಯಾದ ಪ್ರಕರಣ
ಇನ್ನು ಬಂಧಿತ ಆರೋಪಿ 2004ರಲ್ಲಿ ನಡೆದ ಪೊಳಲಿ ಅನಂತು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಇನ್ನು ಟಾರ್ಗೆಟ್ ಗ್ರೂಪ್ ನ ಇಲ್ಯಾಸ್ ಹತ್ಯೆ ಪ್ರಕರಣದಲ್ಲೂ ಆರೋಪಿ ಭಾಗಿಯಾಗಿದ್ದ. ದುಬೈಯಲ್ಲಿದ್ದುಕೊಂಡು ಆರೋಪಿಗಳಿಗೆ ನೆರವು ನೀಡಿದ್ದ. ಮಾತ್ರವಲ್ಲದೆ, ಆರೋಪಿಗಳು ಮುಂಬೈನಲ್ಲಿ ತಲೆ ಮರೆಸಿಕೊಳ್ಳಲು ನೆರವು ನೀಡಿದ್ದ. ಇನ್ನು ಹಲವು ಬೆದರಿಕೆ ಕರೆಗಳನ್ನು ಕೂಡ ಆರೋಪಿ ಒಡ್ಡಿದ್ದ. ಅಲ್ಲದೆ, ಬೆಂಗಳೂರು ನಗರದಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲೂ ಆರೋಪಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.