ಕಾಸರಗೋಡು, ಜೂ 11 (Daijiworld News/SM): ಎಂಡೋಸಲ್ಫಾನ್ ಸಂತ್ರಸ್ತರೊಬ್ಬರ ಕುಟುಂಬವೊಂದಕ್ಕೆ ಏಕೈಕ ಆಶ್ರಯವಾಗಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳ್ಳೂರಿನಲ್ಲಿ ನಡೆದಿದೆ.

ಬೆಳ್ಳೂರು ಕಕ್ಕೆಬೆಟ್ಟುವಿನ ಗಣೇಶ್ ರಾವ್(60) ಮೃತಪಟ್ಟವರು. ಗಣೇಶ್ ರಾವ್ ರವರ 22 ವರ್ಷದ ಮಗಳು ಸೌಮ್ಯ ಮತ್ತು 18 ವರ್ಷದ ಪುತ್ರ ಅರುಣ್ ಕುಮಾರ್ ಹುಟ್ಟಿನಿಂದಲೇ ಅಂಗ ವೈಕಲ್ಯಕ್ಕೆ ತುತ್ತಾಗಿದ್ದರು. ಅಲ್ಲದೆ ನಡೆದಾಡಲು ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದಾರೆ.
ಇಬ್ಬರ ಹೆಸರು ಎಂಡೋ ಸಂತ್ರಸ್ಥ ಪಟ್ಟಿಯಲ್ಲಿದೆ. ಗಣೇಶ್ ರಾವ್ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ಸಲಹುತ್ತಿದ್ದರು. ಕೂಲಿಯಿಂದ ಲಭಿಸುವ ಕನಿಷ್ಠ ವೇತನದಿಂದ ಮಕ್ಕಳ ಚಿಕಿತ್ಸೆ ಹಾಗೂ ಇತರ ಖರ್ಚು ವೆಚ್ಚ ನಿಭಾಯಿಸುತ್ತಿದ್ದರು. ಆದರೆ ಈಗ ಅಕಾಲಿಕ ಸಾವಿನಿಂದ ಎಂಡೋ ಸಂತ್ರಸ್ಥ ಮಕ್ಕಳು ಹಾಗೂ ಪತ್ನಿ ಅತಂತ್ರಗೊಂಡಿದ್ದಾರೆ.