ವ್ಯಾಟಿಕನ್ ಸಿಟಿ, ಜು 04 (DaijiworldNews/MS): 'ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ' ಎಂಬ ವದಂತಿಯನ್ನು ನಿರಾಕರಿಸಿರುವ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು, ನಾನು ಈ ತಿಂಗಳು ಕೆನಡಾಕ್ಕೆ ಭೇಟಿ ನೀಡಲಿದ್ದು, ಸಾಧ್ಯವಾದಷ್ಟು ಬೇಗ ಮಾಸ್ಕೋ ಮತ್ತು ಕೈವ್ಗೆ ಪ್ರಯಾಣ ಬೆಳೆಸಲಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ತಮ್ಮ ವ್ಯಾಟಿಕನ್ ನಿವಾಸದಲ್ಲಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ತಾವು 'ಕ್ಯಾನ್ಸರ್' ನಿಂದ ಬಳಲುತ್ತಿರುವ ವದಂತಿಗಳನ್ನು ನಿರಾಕರಿಸಿ, ಅರೇ.! ವೈದ್ಯರು "ನನಗೆ ಇದರ ಬಗ್ಗೆ ಏನನ್ನೂ ಹೇಳಲಿಲ್ಲ ಯಾಕೆ ?" ಎಂದು ತಮಾಷೆ ಮಾತುಗಳನ್ನಾಡಿದರು. ಅಲ್ಲದೆ ಇದೇ ಮೊಟ್ಟಮೊದಲ ಬಾರಿಗೆ ಅವರು ತಮ್ಮ ಮೊಣಕಾಲಿನ ಸ್ಥಿತಿಯ ವಿವರಗಳನ್ನು ನೀಡಿ ಕೆಲವು ಕರ್ತವ್ಯಗಳನ್ನು ನಿರ್ವಹಿಸುವುದಕ್ಕೆ ಇದರಿಂದ ತಡೆಯಿತು ಎಂದು ಬೇಸರಿಸಿದ್ದಾರೆ.
ಇದೇ ವೇಳೆ 85 ವರ್ಷದ ಪರಮೋಚ್ಚ ಧರ್ಮಗುರು ಫ್ರಾನ್ಸಿಸ್ ಕಳೆದ ತಿಂಗಳು ಅಮೇರಿಕಾದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಗರ್ಭಪಾತದ ಕುರಿತು ತಮ್ಮ ಖಂಡನೆಯನ್ನು ಮತ್ತೊಮ್ಮೆ ಪುನಾರವರ್ತಿಸಿದ್ದಾರೆ.
ಮೊಣಕಾಲಿನ ಚಿಕಿತ್ಸೆ:
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಸೌತ್ ಸುಡಾನ್ಗೆ ತೆರಳಬೇಕಿದ್ದ ದಿನದಂದು ಅವರು ಈ ಸಂದರ್ಶನ ನೀಡಿದ್ದು, ಕಾಲುನೋವಿನ ಹಿನ್ನಲೆ ಈ ಪ್ರವಾಸ ರದ್ದುಗೊಳಿಸಲಾಗಿತ್ತು. 'ಇನ್ನೂ 20 ದಿನಗಳ ಚಿಕಿತ್ಸೆ ಮತ್ತು ಅವರ ಬಲ ಮೊಣಕಾಲಿಗೆ ವಿಶ್ರಾಂತಿ ನೀಡುವುದು ಅನಿವಾರ್ಯ' ಎಂದು ವೈದ್ಯರು ಪೋಪ್ ಅವರಿಗೆ ಸಲಹೆ ನೀಡಿದ್ದಾರೆ.
'ಎರಡೂ ದೇಶಗಳಲ್ಲಿ ಶಾಂತಿಯನ್ನು ಉತ್ತೇಜಿಸಲು ಬಯಸಿದ್ದು ಹೀಗಾಗಿ ಆಫ್ರಿಕಾ ಪ್ರವಾಸವನ್ನು ರದ್ದುಗೊಳಿಸುವ ನಿರ್ಧಾರವು ತನಗೆ "ಹೆಚ್ಚು ನೋವನ್ನು" ಉಂಟುಮಾಡಿದೆ' ಎಂದು ಪೋಸ್ ಸಂದರ್ಶದಲ್ಲಿ ಹೇಳಿದ್ದಾರೆ.