ಮ್ಯೂನಿಚ್, ಜೂ 26 (DaijiworldNews/DB): ಎರಡು ದಿನಗಳ ಜರ್ಮನಿ ಪ್ರವಾಸದ ಹಿನ್ನೆಲೆಯಲ್ಲಿ ಜರ್ಮನಿಯ ಮ್ಯೂನಿಚ್ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಮ್ಯೂನಿಚ್ನಲ್ಲಿರುವ ಭಾರತೀಯರು ಭಾರತದ ಧ್ವಜಗಳನ್ನು ಹಿಡಿದು ಆತ್ಮೀಯವಾಗಿ ಸ್ವಾಗತ ಕೋರಿದರು.
ಪುಟಾಣಿ ಮಕ್ಕಳೂ ಸೇರಿದಂತೆ ಭಾರತೀಯರು ಪ್ರಧಾನಿಯವರನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಮಕ್ಕಳು, ಹಿರಿಯರು ಪ್ರಧಾನಿಯವರಿಂದ ಅಟೋಗ್ರಾಫ್ ತೆಗೆದುಕೊಂಡರು. ಪ್ರಧಾನಿ ಮೋದಿ ಕೂಡಾ ಅಲ್ಲಿರುವ ಭಾರತೀಯರೊಂದಿಗೆ ಮಾತನಾಡಿ ಸಂಭ್ರಮಿಸಿದರು.
ಮೋದಿಯವರು ಎರಡು ದಿನಗಳ ಕಾಲ ಜರ್ಮನಿಯ ಸ್ಕ್ಲೋಸ್ ಎಲ್ಮೌನಲ್ಲಿ ನಡೆಯುವ ಜಿ-7 ಶೃಂಗಸಭೆಯಲ್ಲಿ ವಿಶ್ವ ನಾಯಕರೊಂದಿಗೆ ಮಹತ್ವದ ಸಂವಾದ ನಡೆಸಲಿದ್ದಾರೆ. ಜರ್ಮನಿಯಲ್ಲಿ ವಿಶ್ವದ ವಿವಿಧ ನಾಯಕರೊಂದಿಗೆ ಫಲಪ್ರದ ಚರ್ಚೆಗಳಿಗಾಗಿ ಕಾತರನಾಗಿದ್ದೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಜರ್ಮನಿ ಭೇಟಿಯ ಬಳಿಕ ಅಬುಧಾಬಿಯಲ್ಲಿ ಹೈನೆಸ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಮೋದಿ ಭೇಟಿಯಾಗಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮೋದಿ, ಈ ಭೇಟಿಯು ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ನನ್ನ ವೈಯಕ್ತಿಕ ಸಂತಾಪ ವ್ಯಕ್ತಪಡಿಸಲು ನನಗೆ ಅವಕಾಶ ನೀಡಲಿದೆ ಎಂದಿದ್ದಾರೆ.