ಕಾಬೂಲ್, ಜೂ 18 (DaijiworldNews/MS): ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ಕಾರ್ಟೆ ಪರ್ವಾನ್ ಗುರುದ್ವಾರದ ಬಳಿ ಸರಣಿ ಸ್ಫೋಟ ನಡೆಸಿದ್ದು, ಘಟನೆಯಲ್ಲಿ ಓರ್ವ ಬಲಿಯಾಗಿದ್ದು ನಾಲ್ವರು ನಾಪತ್ತೆಯಾಗಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಗುರುದ್ವಾರವನ್ನು ಗುರಿಯಾಗಿಸಿಕೊಂಡು ಸರಣಿ ಸ್ಫೋಟ ನಡೆಸಲಾಗಿದೆ.
ಕಾಬೂಲ್ನ ಪೊಲೀಸ್ ಜಿಲ್ಲೆಯ ಸಿಖ್-ಹಿಂದೂ ದೇವಾಲಯದ ಬಳಿ ಇಂದು ಜನನಿಬಿಡ ರಸ್ತೆಯಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ವರದಿ ಆಗಿದೆ.
ಸ್ಫೋಟಕ್ಕೂ ಮುನ್ನ ಬಂದೂಕುದಾರಿಯೊಬ್ಬ ಗುರುದ್ವಾರಕ್ಕೆ ಧಾವಿಸಿದ್ದು, ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ ಮಂದಿರದೊಳಗೆ ನುಗ್ಗಿದ್ದಾನೆ. ಉಗ್ರನ ಗುಂಡೇಟಿಗೆ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಗುರುದ್ವಾರದ ಸಾಹೀಬ್ ಆವರಣದ ಬಳಿ ಸರಣಿ ಸ್ಫೋಟ ನಡೆಸಲಾಗಿದ್ದು, ಸಾವು ನೋವುಗಳ ಬಗ್ಗೆ ಆತಂಕ ಶುರುವಾಗಿದೆ. ಘಟನೆಯಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಇನ್ನು ದಾಳಿಯ ವೇಳೆ 30 ಜನರು ಗುರುದ್ವಾರದ ಒಳಗೆ ಸಿಲುಕಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.