ವಾಷಿಂಗ್ಟನ್, ಜೂ 16 (DaijiworldNews/DB): ಭಾರತೀಯ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಪೆಂಟಗನ್ ಉನ್ನತ ಹುದ್ದೆಗೆ ಬುಧವಾರ ನಾಮ ನಿರ್ದೇಶನ ಮಾಡಿದ್ದಾರೆ ಎನ್ನಲಾಗಿದೆ.
ಕಥ್ಲೀನ್ ಎಚ್ ಹಿಕ್ಸ್ಗೆ ಚೀಫ್ ಆಫ್ ಸ್ಟಾಫ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ಲಂಬ್ ಅವರನ್ನು ಸ್ವಾಧೀನ ಮತ್ತು ಸುಸ್ಥಿರತೆಗಾಗಿ ರಕ್ಷಣಾ ಉಪ ಕಾರ್ಯದರ್ಶಿ ಹುದ್ದೆಗೆ ಬೈಡೆನ್ ಅವರು ನಾಮ ನಿರ್ದೇಶನ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗೂಗಲ್ನಲ್ಲಿ ಸಂಶೋಧನಾ ನಿರ್ದೇಶಕರಾಗಿ , ಫೇಸ್ಬುಕ್ನಲ್ಲಿ ಪಾಲಿಸಿ ಅನಾಲಿಸಿಸ್ನ ಜಾಗತಿಕ ಮುಖ್ಯಸ್ಥರಾಗಿ ಹಾಗೂ ಆರ್ಎಎನ್ಡಿ ಕಾರ್ಪೊರೇಷನ್ನಲ್ಲಿ ಹಿರಿಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ ಅನುಭವ ಪ್ಲಂಬ್ ಅವರಿಗಿದೆ.
ರಕ್ಷಣಾ ಸಚಿವಾಲಯ, ಇಂಧನ ಸಚಿವಾಲಯ ಮತ್ತು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ರಾಷ್ಟ್ರೀಯ ಭದ್ರತೆ ಸಂಬಂಧಿಸಿದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಅನುಭವಿ ಅವರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ವೃತ್ತಿ ಅನುಭವ ಹೊಂದಿದ್ದಾರೆ.
ಹಾರ್ವರ್ಡ್ನಲ್ಲಿ ಪೋಸ್ಟ್ ಡಾಕ್ಟರೇಟ್ ಮಾಡಿರುವ ಅವರು, ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಮತ್ತು ಎಂಎಸ್ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಬಿಎಸ್ ಪದವಿ ಕೂಡಾ ಪಡೆದುಕೊಂಡಿದ್ದಾರೆ.