ಬ್ರೆಸಿಲಿಯಾ, ಅ.26 (DaijiworldNews/AA): ತೀವ್ರ ಕುತೂಹಲ ಮೂಡಿಸಿದ್ದ ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ ಮರು ಮತದಾನ ಫಲಿತಾಂಶದಲ್ಲಿ ಲುಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರು ಭರ್ಜರಿ ಗೆಲುವು ಸಾಧಿಸುವ ಮೂಲಕ 4 ನೇ ಬಾರಿಗೆ ಅಧ್ಯಕ್ಷರಾಗಿ ಮರುಆಯ್ಕೆಯಾಗಿದ್ದಾರೆ.

ಶೇ.96ಕ್ಕೂ ಹೆಚ್ಚು ಮತಗಳ ಎಣಿಕೆ ಪೂರ್ಣಗೊಂಡ ಅಧಿಕೃತ ಫಲಿತಾಂಶಗಳ ಪ್ರಕಾರ, ಲುಲಾ ಅವರು ಶೇ. 51ಕ್ಕೂ ಅಧಿಕ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಲುಲಾ ಎದುರಾಳಿ, ಬಲಪಂಥೀಯ ಸೆನೆಟರ್ ಫ್ಲಾವಿಯೊ ಬೋಲ್ಸನಾರೊ ಶೇ. 48ಕ್ಕೂ ಹೆಚ್ಚು ಮತಗಳನ್ನು ಪಡೆದು ಸೋಲನ್ನನುಭವಿಸಿದ್ದಾರೆ.
ಮತದಾರರು ಮತಗಟ್ಟೆಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಸೌಲಭ್ಯಗಳನ್ನು ಕೆಲವು ಸ್ಥಳೀಯ ಆಡಳಿತಗಳು ಕಡಿತಗೊಳಿಸಿವೆ ಎಂದು ಆರೋಪಿಸಿ ಲುಲಾ ಅವರ ಬಣ ಮತದಾನದ ಅವಧಿಯನ್ನು ವಿಸ್ತರಿಸುವಂತೆ ಕೋರಿತು. ಇದರೊಂದಿಗೆ ಕೆಲವು ರಾಜ್ಯಗಳಲ್ಲಿ ಸುರಿದ ಭಾರಿ ಮಳೆಯ ನೆಪವೊಡ್ಡಿ ಬೋಲ್ಸನಾರೊ ಬಣವೂ ಸಮಯ ವಿಸ್ತರಿಸುವಂತೆ ಮನವಿ ಮಾಡಿತ್ತು. ಈ ಹಿನ್ನೆಲೆ ಮತದಾನದ ಸಮಯವನ್ನು ಸಂಜೆ 5 ಗಂಟೆಯ ನಂತರವೂ ಎರಡು ಗಂಟೆಗಳ ಕಾಲ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಆದರೆ ಸುಪ್ರೀಂ ಕೋರ್ಟ್ ಆದೇಶ ತಲುಪುವಷ್ಟರಲ್ಲಿ ಹಲವು ಮತಗಟ್ಟೆಗಳಲ್ಲಿ ಸಿಬ್ಬಂದಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಿಷ್ಕ್ರಿಯಗೊಳಿಸಿದ್ದರು. ಇದರಿಂದಾಗಿ ಆ ಕೇಂದ್ರಗಳಲ್ಲಿ ಮತದಾನವನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ.
ಅಕ್ಟೋಬರ್ ೪ರಂದು ನಡೆದ ಮೊದಲ ಹಂತದ ಮತದಾನದಲ್ಲಿ ಫ್ಲಾವಿಯೊ ಮುನ್ನಡೆ ಸಾಧಿಸಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಲುಲಾ ಅವರು ಭರ್ಜರಿ ಮುನ್ನಡೆ ಸಾಧಿಸಿ ಗೆಲುವು ಸಾಧಿಸಿದ್ದಾರೆ. ಲುಲಾ ಅವರು 2027ರ ಜನವರಿ 5 ರಂದು ಅಧಿಕೃತವಾಗಿ ತಮ್ಮ ಹೊಸ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.