ವನವಾಟು, ಅ.24 (DaijiworldNews/AA): ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿರುವ ಪುಟ್ಟ ದ್ವೀಪ ರಾಷ್ಟ್ರವಾದ ವನವಾಟು ಶನಿವಾರ ಮುಂಜಾನೆ ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 7.2, 6.9 ಹಾಗೂ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.

ಕೆಲವೇ ನಿಮಿಷಗಳ ಅಂತರದಲ್ಲಿ ಸಂಭವಿಸಿದ್ದು, ಸ್ಥಳೀಯ ಜನರಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಪ್ರಬಲ ಕಂಪನದ ಬೆನ್ನಲ್ಲೇ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.
ಬೆಳಗ್ಗೆ 8:12 ಕ್ಕೆ ಮೊದಲ ಬಾರಿಗೆ 7.2 ತೀವ್ರತೆಯ ಭೂಕಂಪವು ಸಂಭವಿಸಿತು. ಇದರ ಕೇಂದ್ರಬಿಂದು ಟೋರ್ಬಾ ಪ್ರಾಂತ್ಯದ ರಾಜಧಾನಿ ಸೋಲಾ ಪಟ್ಟಣದ ಪಶ್ಚಿಮಕ್ಕೆ 200 ಕಿ.ಮೀ ದೂರದಲ್ಲಿ ಸಮುದ್ರದಾಳದಲ್ಲಿ ದಾಖಲಾಗಿದೆ.
ಮೊದಲ ಕಂಪನ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಎರಡನೇ ಬಾರಿಗೆ 6.9 ತೀವ್ರತೆಯ ಭೂಕಂಪ ಸಂಭವಿಸಿತು. ಇದರ ಕೇಂದ್ರಬಿಂದು ಸನ್ಮಾ ಪ್ರಾಂತ್ಯದ ಎಸ್ಪಿರಿಟು ಸ್ಯಾಂಟೋ ದ್ವೀಪದಲ್ಲಿರುವ ಪೋರ್ಟ್ ಓಲ್ರಿ ಗ್ರಾಮದ ವಾಯುವ್ಯಕ್ಕೆ 197 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.
ಎರಡನೇ ಕಂಪನ ಸಂಭವಿಸಿದ ಕೇವಲ 11 ನಿಮಿಷಗಳಲ್ಲಿ ಮೋರನೇ ಬಾರಿಗೆ 6.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತು. ಅದೇ ಪೋರ್ಟ್ ಓಲ್ರಿಯಿಂದ 170 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಮೂರನೇ ಕಂಪನದ ಕೇಂದ್ರಬಿಂದು ದಾಖಲಾಯಿತು.
ಸತತ ಕಂಪನಗಳಿಂದ ಕಡಲ ತೀರದಲ್ಲಿ ಸುನಾಮಿ ಭೀತಿ ಉಂಟಾಗಿ ಮುನ್ನೆಚ್ಚರಿಕೆ ಸೈರನ್ ಮೊಳಗಿಸಲಾಯಿತಾದರೂ, ಅದೃಷ್ಟವಶಾತ್ ಈವರೆಗೆ ಯಾವುದೇ ಪ್ರಬಲ ಅಲೆಗಳು ದಡಕ್ಕೆ ಅಪ್ಪಳಿಸಿಲ್ಲ. ಕಟ್ಟಡಗಳು ಕುಸಿದಿರುವ ಅಥವಾ ಸಾವುನೋವುಗಳು ಸಂಭವಿಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಇನ್ನು ಸಮುದ್ರ ತೀರದಿಂದ ದೂರವಿದ್ದು, ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸ್ಥಳೀಯ ಆಡಳಿತ ಜನರಿಗೆ ನಿರ್ದೇಶನ ನೀಡಿದೆ.