ವಾಷಿಂಗ್ಟನ್, ಅ.22 (DaijiworldNews/AA): ತಮಗೆ ಈ ಎರಡೂ ಪ್ರಶಸ್ತಿಗಳು ಸಿಗದಂತೆ ವಂಚಿಸಲಾಗಿದೆ ಮತ್ತು ತಮ್ಮ ಬರವಣಿಗೆಗೆ ಪುಲಿಟ್ಜರ್ ಗೌರವ ದಕ್ಕಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಅಮೆರಿಕದ ಮಧ್ಯಂತರ ಚುನಾವಣಾ ಪ್ರಚಾರದ ಅಂಗವಾಗಿ ಪೆಂಡಲ್ಟನ್ನ ಟಿ. ಎಡ್ ಗ್ಯಾರಿಸನ್ ಅರೆನಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ನನಗೆ ನೊಬೆಲ್ ಪ್ರಶಸ್ತಿ ಸಿಗಲಿಲ್ಲ, ಪುಲಿಟ್ಜರ್ ಪ್ರಶಸ್ತಿಯೂ ಬರಲಿಲ್ಲ. ನಿಜ ಹೇಳಬೇಕೆಂದರೆ, ನನ್ನ ಬರವಣಿಗೆಗಾಗಿ ನನಗೇ ಪುಲಿಟ್ಜರ್ ಪ್ರಶಸ್ತಿ ಸಿಗಬೇಕಿತ್ತು. ಈಗ ಪ್ರಶಸ್ತಿ ಪಡೆದಿರುವವರು ಅದಕ್ಕೆ ಅರ್ಹರೇ ಅಲ್ಲ. ರಷ್ಯಾ, ರಷ್ಯಾ, ರಷ್ಯಾ ಎಂಬ ವಿಷಯದ ಕುರಿತು ನಿಖರ ಮತ್ತು ವರದಿಗಾರಿಕೆ ಮಾಡಿದ್ದಕ್ಕಾಗಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಆದರೆ ಅವರ ವರದಿಗಳು ಸಂಪೂರ್ಣ ತಪ್ಪಾಗಿದ್ದವು. ಅವರೆಲ್ಲರೂ ಸುಳ್ಳು ಬರೆದಿದ್ದರು" ಎಂದು ಕಿಡಿಕಾರಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿಯ ಹೆಸರನ್ನೇ ಮರೆತು ಅದನ್ನೂ 'ಪುಲಿಟ್ಜರ್' ಎಂದು ಕರೆದ ಟ್ರಂಪ್, "ನಾನು ಈ ಎಲ್ಲಾ ಯುದ್ಧಗಳನ್ನು ನಿಲ್ಲಿಸಿ ಬಗೆಹರಿಸಿದೆ, ಆದರೆ ಅವರು ಆ ಅದ್ಭುತ ಶಾಂತಿ ಪ್ರಶಸ್ತಿಯನ್ನು ಬೇರೆಯವರಿಗೆ ಕೊಟ್ಟರು, ಅಲ್ಲವೇ? ಆ ಶಾಂತಿ ಪ್ರಶಸ್ತಿಯ ಹೆಸರು ಯಾರಿಗಾದರೂ ಗೊತ್ತಿದೆಯೇ? ಆ ಶಾಂತಿ ಪ್ರಶಸ್ತಿ ಅವರು ಆ ಪುಲಿಟ್ಜರ್ ಪ್ರಶಸ್ತಿಯನ್ನು ಒಬ್ಬ ಯುವತಿಗೆ ನೀಡಿದರು" ಎಂದು ಹೇಳಿದರು.