ರಿಯಾದ್ , ಅ.22 (DaijiworldNews/AK): ಸೌದಿ ಅರೇಬಿಯಾದ ಸೌದಿ ಅರಾಮ್ಕೊ ಕಂಪನಿಯ ಶೈಬಾ ತೈಲ ಸ್ಥಾವರವನ್ನು ಗುರಿಯಾಗಿಸಿಕೊಂಡು ಬುಧವಾರ ಡ್ರೋನ್ ದಾಳಿ ನಡೆದಿದೆ.

ಸೌದಿ ಸೇನೆ ಡ್ರೋನ್ ತಡೆದರೂ, ಅದರ ಅವಶೇಷಗಳು ಬಿದ್ದ ಪರಿಣಾಮ ಬೆಂಕಿ ಹೊತ್ತಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಫಿಲಿಪೈನ್ಸ್ ಮತ್ತು ನೇಪಾಳದ ಪ್ರಜೆಗಳು ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಭಾರತೀಯ ಮತ್ತು ಪಾಕಿಸ್ತಾನದ ತಲಾ ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ನ ಅವಶೇಷಗಳು ತೈಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆದಾರರ ವಾಹನದ ಮೇಲೆ ಬಿದ್ದಿದ್ದು, ಬೆಂಕಿ ಕಾಣಿಸಿಕೊಂಡಿದೆ. ಆದರೆ, ಈ ಘಟನೆಯಿಂದ ತೈಲ ಸ್ಥಾವರದ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸೌದಿ ಇಂಧನ ಸಚಿವಾಲಯ ತಿಳಿಸಿದೆ.
ಸೌದಿ ಅರೇಬಿಯಾದ ಪ್ರಮುಖ ಮೂಲಸೌಕರ್ಯಗಳ ಮೇಲಿನ ದಾಳಿಗಳ ಆತಂಕ ಹೆಚ್ಚಾಗಿದೆ. ದಮ್ಮಾಮ್ನಲ್ಲಿರುವ ಕಿಂಗ್ ಫಹದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಬುಧವಾರ ದಾಳಿ ನಡೆದಿದ್ದು, ಒಬ್ಬ ಮೃತಪಟ್ಟಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಆಸ್ತಿಪಾಸ್ತಿಗೂ ಹಾನಿಯಾಗಿದೆ ಎಂದು ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಅನಿವಾರ್ಯವಲ್ಲದ ಸಿಬ್ಬಂದಿ ಮತ್ತು ಅವರ ಕುಟುಂಬದವರು ದೇಶವನ್ನು ತೊರೆಯುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಆದೇಶಿಸಿದೆ.