ಪ್ಯಾರಿಸ್, ಅ.19 (DaijiworldNews/AK): ಫ್ರಾನ್ಸ್ನ ಹಲವು ನಗರಗಳಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಅಶಾಂತಿಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ಫ್ರಾನ್ಸ್ ಮತ್ತು ಇಡೀ ಯುರೋಪ್ ಖಂಡವು ತಕ್ಷಣವೇ ತಮ್ಮ ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚಿ, ಹಿಂಸಾಚಾರದಲ್ಲಿ ಭಾಗಿಯಾಗಿರುವ ವಲಸಿಗರನ್ನು ಗಡೀಪಾರು ಮಾಡದಿದ್ದರೆ ಇಡೀ ಯುರೋಪ್ ಸಂಪೂರ್ಣ ಕುಸಿತವನ್ನು ಎದುರಿಸಬೇಕಾಗುತ್ತದೆ ಎಂದು ಅವರು ಕಟುವಾಗಿ ಎಚ್ಚರಿಸಿದ್ದಾರೆ.
ಶ್ವೇತಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ವಲಸೆ ನೀತಿಯನ್ನು ನೇರವಾಗಿ ಗುರಿಯಾಗಿಸಿ ಮಾತನಾಡಿ, “ಪ್ಯಾರಿಸ್ ಶೀಘ್ರದಲ್ಲೇ ಸಂಪೂರ್ಣ ಮುಸ್ಲಿಂ ನಗರವಾಗಲಿದೆ. ಇದು ಒಪ್ಪಿತ ಒಪ್ಪಂದವಾಗಿರಲಿಲ್ಲ. ನಿಮ್ಮ ಗಡಿಗಳನ್ನು ಕೂಡಲೇ ಮುಚ್ಚಿ ಎಂದು ನಾನು ಮ್ಯಾಕ್ರನ್ಗೆ ಹಿಂದೆಯೇ ಹೇಳಿದ್ದೆ” ಎಂದು ಗುಡುಗಿದ್ದಾರೆ.
ಫ್ರಾನ್ಸ್ನಲ್ಲಿ ನಡೆಯುತ್ತಿರುವ ಹಿಂಸಾಚಾರವು ಶೈಕ್ಷಣಿಕ, ಆರ್ಥಿಕ ಅಥವಾ ಸ್ಥಳೀಯ ಸರ್ಕಾರದ ನೀತಿಗಳಿಂದ ಉಂಟಾಗಿದೆ ಎಂಬ ವಾದವನ್ನು ಟ್ರಂಪ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. “ಫ್ರಾನ್ಸ್ನಲ್ಲಿ ನಡೆಯುತ್ತಿರುವ ದುಃಖಕರ ಪರಿಸ್ಥಿತಿಗೆ ಏಕೈಕ ಕಾರಣ ಅತಿಯಾದ ವಲಸೆ. ಅವರು ತಮ್ಮ ದೇಶ, ಸಂಸ್ಕೃತಿ, ಕಲೆ ಮತ್ತು ಕಟ್ಟಡಗಳನ್ನು ಪ್ರೀತಿಸದ ಜನರನ್ನು ಮುಕ್ತವಾಗಿ ದೇಶದೊಳಗೆ ಬಿಡುತ್ತಿದ್ದಾರೆ” ಎಂದು ಕಿಡಿಕಾರಿದರು.