ವಾಷಿಂಗ್ಟನ್, ಅ.17 (DaijiworldNews/AA): ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವ ಭಾರತ, ಚೀನಾ ಸೇರಿ ಇತರ ದೇಶಗಳ ಮೇಲೆ ಶೇ 100ರವರೆಗೆ ಸುಂಕ ವಿಧಿಸುವ ಕ್ರಮಕ್ಕೆ ಮುಂದಾಗಿದ್ದ ಅಮೆರಿಕ ಸದ್ಯಕ್ಕೆ ಅದರಿಂದ ವಿನಾಯಿತಿ ನೀಡಿದೆ.

ಪ್ರಸ್ತುತ ಸಂದರ್ಭದಲ್ಲಿ ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವ ದೇಶಗಳಿಗೆ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿದೆ. ಈ ಕುರಿತು ಅಮೆರಿಕದ ಸಂಸತ್ತಿಗೂ ಪ್ರಮಾಣಪತ್ರ ಸಲ್ಲಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆದೇಶ ಹೊರಡಿಸಿದ್ದಾರೆ.
"ಗ್ರಹಾಂ ಕಾಯ್ದೆಯಡಿ ಒದಗಿಸಲಾದ ನಿರ್ಬಂಧಗಳು, ನಿರ್ಬಂಧಾತ್ಮಕ ಕ್ರಮಗಳು ಮತ್ತು ಸುಂಕಗಳ ಅನ್ವಯದಿಂದ ನಾನು ವಿನಾಯಿತಿ ನೀಡುತ್ತಿದ್ದೇನೆ. ಪ್ರಸ್ತುತ ಸಮಯದಲ್ಲಿ ಇಂತಹ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ. ಇದನ್ನ ಪ್ರಮಾಣೀಕರಿಸುವ ದಾಖಲೆಯನ್ನ ಸಂಸತ್ತಿಗೆ ಸಲ್ಲಿಸಿದ್ದೇನೆ" ಎಂದು ಕಾರ್ಯಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿಸುವ ದೇಶಗಳಲ್ಲಿ ಚೀನಾ ಮತ್ತು ಭಾರತ ಪ್ರಮುಖವಾಗಿದ್ದು, ಅಜರ್ಬೈಜಾನ್, ಹಂಗೇರಿ ಹಾಗೂ ಸ್ಲೋವಾಕಿಯಾ ಕೂಡ ತೈಲ ಖರೀದಿಸುತ್ತವೆ. ಇದೀಗ ಅಮೆರಿಕದ ಈ ನಿರ್ಧಾರದಿಂದ ರಷ್ಯಾದಿಂದ ತೈಲ ಖರೀದಿಸುವ ದೇಶಗಳಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.