ಇಸ್ಲಾಮಾಬಾದ್, ಅ.12 (DaijiworldNews/TA): ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ಸಮೀಪ ಪಾಕಿಸ್ತಾನ ಸೇನೆಗೆ ಸೇರಿದ ತರಬೇತಿ ವಿಮಾನವೊಂದು ಪತನಗೊಂಡಿದ್ದು, ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ. ಮೃತರನ್ನು ತರಬೇತುದಾರ ಮೇಜರ್ ಹುಸ್ನೇನ್ ಶಹಜಾದ್ ಹುಮಾಯೂನ್ ಮತ್ತು ಶಿಕ್ಷಣಾರ್ಥಿ ಪೈಲಟ್ ಕ್ಯಾಪ್ಟನ್ ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ.

ಕ್ವೆಟ್ಟಾ ಜಿಲ್ಲೆಯ ನವಾನ್ ಕಿಲ್ಲಿ ಪ್ರದೇಶದಲ್ಲಿ ಪಾಕಿಸ್ತಾನ ಆರ್ಮಿ ಏವಿಯೇಷನ್ಗೆ ಸೇರಿದ ಮುಶಾಕ್ ಮಾದರಿಯ ತರಬೇತಿ ವಿಮಾನವು ಸೋಮವಾರ ಎಂದಿನಂತೆ ಹಾರಾಟ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮಧ್ಯಾಹ್ನದ ವೇಳೆಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಬಳಿಕ ಅದು ನೆಲಕ್ಕೆ ಅಪ್ಪಳಿಸಿದೆ ಎಂದು ಪಾಕಿಸ್ತಾನ ಸೇನೆಯ ವಕ್ತಾರರು ತಿಳಿಸಿದ್ದಾರೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳು ಮೃತಪಟ್ಟಿದ್ದಾರೆ ಎಂದು ಸೇನೆ ದೃಢಪಡಿಸಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಬೇಕಿವೆ. ವಿಮಾನ ಅಪಘಾತಕ್ಕೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಗೃಹ ಸಚಿವ ಮೊಹ್ಸಿನ್ ನಖ್ವಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದು, ದುಃಖದ ಸಂದರ್ಭದಲ್ಲಿ ಅವರೊಂದಿಗೆ ಇರುವುದಾಗಿ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಈ ಹಿಂದೆ ಕೂಡ ಸೇನಾ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಅಪಘಾತಕ್ಕೀಡಾದ ಘಟನೆಗಳು ವರದಿಯಾಗಿವೆ. ಜೂನ್ನಲ್ಲಿ ಮುಜಫರಾಬಾದ್ ಸಮೀಪ ಪಾಕಿಸ್ತಾನ ಸೇನೆಯ ಎಂಐ-17 ಹೆಲಿಕಾಪ್ಟರ್ ಟೇಕ್ಆಫ್ ವೇಳೆ ತಾಂತ್ರಿಕ ದೋಷದಿಂದ ಪತನಗೊಂಡಿತ್ತು ಎನ್ನಲಾಗಿದೆ. ಅದೇ ತಿಂಗಳಲ್ಲಿ ಮರ್ದಾನ್ನಲ್ಲಿ ತರಬೇತಿ ನಿರತ ವಾಯುಪಡೆಯ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್ಗಳು ಮೃತಪಟ್ಟಿದ್ದರು. ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ದಿಯಾಮೆರ್ ಜಿಲ್ಲೆಯ ಚಿಲಾಸ್ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಐವರು ಸಿಬ್ಬಂದಿ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ.