ರಿಯಾದ್, ಅ.12 (DaijiworldNews/AA): ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯೆಮೆನ್ನ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದು, ಈ ವೇಳೆ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಹೈದರಾಬಾದ್ನ ಮೆಹದಿಪಟ್ನಂ ನಿವಾಸಿ ಮೊಹಮ್ಮದ್ ಯೂಸುಫ್ ಅಲಿ ಶನಿವಾರ ನಡೆದ ಮೊದಲ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಇಬ್ಬರು ಪುತ್ರರಿಗೆ ಹಾಗೂ ಚಿಕ್ಕಮ್ಮನಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಪತ್ನಿ ಮತ್ತು ಪುತ್ರಿ ಸುರಕ್ಷಿತವಾಗಿರುವುದಾಗಿ ಎಂದು ತಿಳಿದುಬಂದಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, 'ಹೈದರಾಬಾದಿನ ಮೊಹಮ್ಮದ್ ಯೂಸುಫ್ ಅಲಿ ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಇಬ್ಬರು ಪುತ್ರರೂ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ' ಎಂದು ಹೇಳಿದ್ದಾರೆ.
'ನಾನು ರಿಯಾದ್ನಲ್ಲಿರುವ ಯೂಸುಫ್ ಅವರ ಸಂಬಂಧಿಕರು ಹಾಗೂ ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ ಅವರೊಂದಿಗೆ ಮಾತನಾಡಿದ್ದೇನೆ. ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ಕಲ್ಪಿಸಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡುತ್ತೇನೆ' ಎಂದು ಪೋಸ್ಟ್ ಮಾಡಿದ್ದಾರೆ.
ಗಾಯಗೊಂಡಿರುವ ಮೂವರು ಭಾರತೀಯರು ತೀವ್ರ ನಿಗಾ ಘಟಕದಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಇಬ್ಬರು ಸಾಮಾನ್ಯ ವಾರ್ಡ್ನಲ್ಲಿದ್ದು, ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ರಿಯಾದ್ ವಿಮಾನ ನಿಲ್ದಾಣದ ಮೇಲೆ ಸತತ ಎರಡು ದಿನಗಳಲ್ಲಿ ಎರಡು ಕ್ಷಿಪಣಿ ದಾಳಿಗಳು ನಡೆದಿವೆ. ಶನಿವಾರ ನಡೆದ ಮೊದಲ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭಾನುವಾರ ನಡೆದ ಎರಡನೆ ದಾಳಿಯಲ್ಲಿ ಓರ್ವ ಮೃತಪಟ್ಟು 11 ಜನರು ಗಾಯಗೊಂಡಿದ್ದಾರೆ. ಇನ್ನು ಈ ಎರಡೂ ದಾಳಿಗಳ ಹೊಣೆಯನ್ನು ಯೆಮೆನ್ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ.