ಕಠ್ಮಂಡು, ಅ.11 (DaijiworldNews/TA): ನೇಪಾಳದ ಪಶ್ಚಿಮ ಭಾಗದ ಗೂರ್ಖಾ ಜಿಲ್ಲೆಯಲ್ಲಿ ಬುಧಿ ಗಂಡಕಿ ನದಿಯಲ್ಲಿ ಭಾನುವಾರ ಹಠಾತ್ ಪ್ರವಾಹ ಉಂಟಾಗಿ ಭಾರೀ ಹಾನಿ ಸಂಭವಿಸಿದೆ. ಪ್ರವಾಹದ ರಭಸಕ್ಕೆ ಮನೆಗಳು, ಎರಡು ತೂಗು ಸೇತುವೆಗಳು ಹಾಗೂ ಒಂದು ಉಕ್ಕಿನ ಸೇತುವೆ ಕೊಚ್ಚಿಹೋಗಿವೆ. 341 ಮೆಗಾವ್ಯಾಟ್ ಸಾಮರ್ಥ್ಯದ ಬುಧಿ ಜಲವಿದ್ಯುತ್ ಯೋಜನೆಗೂ ಹಾನಿಯಾಗಿದೆ.

ಚೀನಾದ ಗಡಿಯ ಸಮೀಪವಿರುವ ಚುಮ್ನುಬ್ರಿ ಗ್ರಾಮೀಣ ಪುರಸಭೆಯ ಜಗತ್, ಸಲ್ಲೇರಿ ಸೇರಿದಂತೆ ಹಲವು ಪ್ರದೇಶಗಳು ಪ್ರವಾಹದಿಂದ ಬಾಧಿತವಾಗಿವೆ. ಪ್ರವಾಹದ ಆತಂಕದಿಂದ ಸ್ಥಳೀಯ ನಿವಾಸಿಗಳು ಹಾಗೂ ಪ್ರವಾಸಿಗರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಭಾನುವಾರ ಬೆಳಗಿನವರೆಗೆ ಯಾವುದೇ ಸಾವು ಸಂಭವಿಸಿದ ವರದಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಲೋಕ್ಪಾ ಮತ್ತು ಚುಮ್ಲಿಂಗ್ ನಡುವಿನ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ನದಿಯ ಹರಿವು ತಾತ್ಕಾಲಿಕವಾಗಿ ತಡೆಯಲ್ಪಟ್ಟಿತ್ತು. ಬಳಿಕ ಸಂಗ್ರಹಗೊಂಡ ನೀರು ಏಕಾಏಕಿ ಹರಿದು ಪ್ರವಾಹ ಉಂಟಾಗಿರುವ ಸಾಧ್ಯತೆಯಿದೆ. ಅಧಿಕಾರಿಗಳು ಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಿದ್ದಾರೆ. ಮತ್ತಷ್ಟು ಪ್ರವಾಹ ಸಂಭವಿಸುವ ಆತಂಕ ಇರುವುದರಿಂದ ನದಿಯ ಕೆಳಭಾಗದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಸೇತುವೆಗಳು ಕೊಚ್ಚಿಹೋಗಿರುವುದರಿಂದ ಹಲವು ಪ್ರದೇಶಗಳ ನಡುವಿನ ಸಂಪರ್ಕಕ್ಕೂ ತೊಂದರೆಯಾಗಿದೆ.