ವಾಷಿಂಗ್ಟನ್, ಅ.10 (DaijiworldNews/AA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗಿನ ಮಾತುಕತೆ ಬಳಿಕ ರಷ್ಯಾದಿಂದ ಡೀಸೆಲ್ ಇಂಧನ ಪೂರೈಕೆಗೆ ಒಪ್ಪಂದವಾಗಿದೆ ಎಂದು ಘೋಷಣೆ ಮಾಡಿದ್ದಾರೆ.

ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪುಟಿನ್ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ ಎಂದು ಬರೆದುಕೊಂಡಿರುವ ಟ್ರಂಪ್, "ರಷ್ಯಾ ತಕ್ಷಣವೇ ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗೆ 3 ಲಕ್ಷ ಟನ್ಗಿಂತ ಹೆಚ್ಚು ಡೀಸೆಲ್ ಪೂರೈಸಲಿದೆ. ನವೆಂಬರ್ನಲ್ಲಿ ಮತ್ತಷ್ಟು 5 ಲಕ್ಷ ಟನ್ ಹಾಗೂ ನಂತರ 10 ಲಕ್ಷ ಟನ್ ಪೂರೈಸುವ ಯೋಜನೆಯಿದೆ. ಇದಾದ ಬಳಿಕ ಕಡಿಮೆ ಅವಧಿಯಲ್ಲೇ ಹೆಚ್ಚುವರಿಯಾಗಿ 30 ಲಕ್ಷ ಟನ್ ಡೀಸೆಲ್ ಪೂರೈಕೆಯಾಗಲಿದೆ" ಎಂದು ಹೇಳಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಈ ಹಿಂದೆ ಭಾರತ ಸೇರಿದಂತೆ ಇತರ ದೇಶಗಳ ಮೇಲೆ ಹೆಚ್ಚುವರಿ ತೆರಿಗೆ ಮತ್ತು ದಂಡನಾತ್ಮಕ ಕ್ರಮಗಳನ್ನು ಟ್ರಂಪ್ ಜರುಗಿಸಿದ್ದರು. ಆದರೆ ಇದೀಗ ತಾವೇ ರಷ್ಯಾದಿಂದ ನೇರವಾಗಿ ಡೀಸೆಲ್ ಖರೀದಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ನಡೆಸುತ್ತಿರುವ ಸಂದರ್ಭದಲ್ಲಿ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಉಕ್ರೇನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಒಪ್ಪಂದದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಮತ್ತು ಚರ್ಚೆಗೆ ಕಾರಣವಾಗಿದೆ.