ರಿಯಾದ್, ಅ.08 (DaijiworldNews/AK) : ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಯೆಮೆನ್ನ ಹೌತಿ ಬಂಡುಕೋರರ ಗುಂಪು ಹೇಳಿಕೊಂಡಿದೆ. ಈ ಬೆಳವಣಿಗೆಯಿಂದ ಪ್ರದೇಶದಲ್ಲಿ ಈಗಾಗಲೇ ಇರುವ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ವರದಿಗಳ ಪ್ರಕಾರ, ದಾಳಿಯಿಂದ ವಿಮಾನ ನಿಲ್ದಾಣದ ವಿಮಾನ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿದೆ. ಬಳಿಕ ನಿಲುಗಡೆಗೊಂಡಿದ್ದ ವಿಮಾನವೊಂದರಿಂದ ಹೊಗೆ ದಟ್ಟವಾಗಿ ಬರುತ್ತಿರುವುದು ಕಂಡುಬಂದಿದೆ. ಸ್ಫೋಟಗಳಿಗೆ ಕಾರಣವೇನು ಎಂಬುದನ್ನು ಸ್ವತಂತ್ರವಾಗಿ ತಕ್ಷಣ ದೃಢಪಡಿಸಲು ಸಾಧ್ಯವಾಗಿಲ್ಲ. ಈ ಕುರಿತು ತಕ್ಷಣದ ಪ್ರತಿಕ್ರಿಯೆ ನೀಡಲು ಸೌದಿ ಅಧಿಕಾರಿಗಳೂ ಕೂಡ ನಿರಾಕರಿಸಿದ್ದಾರೆ.
ಇರಾನ್, ಸೌದಿ ಅರೇಬಿಯಾ ಮತ್ತು ಯೆಮೆನ್ ನಡುವೆ ವ್ಯಾಪಕ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಸೌದಿ ಅರೇಬಿಯಾದ ವಿವಿಧ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಹೌತಿಗಳು ಪದೇಪದೇ ಹೇಳಿಕೊಂಡಿದ್ದಾರೆ.