ದುಬೈ, ಅ.08 (DaijiworldNews/AK) : ನೃತಶಕ್ತಿ -soul of dance ಅಕಾಡಮಿ ಸಾದರ ಪಡಿಸಿದ ನೃತ್ಯ ವೈಭವ-2026 ಯು.ಎ.ಇ.ಯ ಅಜ್ಮಾನ್ ನಲ್ಲಿರುವ ನಾರ್ತ್ ಬ್ರಿಟೀಷ್ ಸ್ಕೂಲಿನಲ್ಲಿ ದಿನಾಂಕ ಅಕ್ಟೋಬರ್ 4 ರಂದು ಸಂಪನ್ನಗೊಂಡಿತು. ವಿದುಷಿ ಶ್ರೀಮತಿ ರೂಪಾ ಕಿರಣ್ ಇವರ ಸಂಯೋಜನೆಯಲ್ಲಿ ನಡೆದ ಭಾರತೀಯ ಶೈಲಿಯ ನಾಟ್ಯ ಕಾರ್ಯಕ್ರಮ ನೆರೆದ ಕಲಾರಸಿಕರ ಮನಸ್ಸನ್ನು ಸೂರೆಗೊಂಡಿತು.








ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾದ ಡಾ:ಬಿ ಆರ್ ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅವರ ಜೊತೆಯಲ್ಲಿ ವೇದಿಕೆಯಲ್ಲಿ ಸರ್ವೋತ್ತಮಶೆಟ್ಟಿ, ಪ್ರವೀಣ್ ವಕ್ವಾಡಿ, ವಿದುಷಿ ಮೇರಿ ಬಿನಿ, ವಿಶ್ವನಾಥ ಶೆಟ್ಟಿ, ದೀಪಕ್ ಪೂಜಾರಿ ಹಾಗೂ ರಾಜೇಶ್ ಕುತ್ತಾರ್ ಉಪಸ್ಥಿತರಿದ್ದು ಶುಭ ಕಾಮನೆಗಳನ್ನು ಸಲ್ಲಿಸಿದರು. ಕಿರಣ್ ಕೊಟ್ಟಾರಿ ಗಣ್ಯರನ್ನು ಶಾಲು ಹೊದಿಸಿ ಸ್ವಾಗತಿಸಿದರು.ಅ.ಭಾ. ಭರತನಾಟ್ಯ ಸಂಸ್ಥೆಯ ಸ್ಥಾಪಕಿ ಶ್ರೀಮತಿ ರೂಪಾ ಕಿರಣ್ ಇವರ ಗುರು ವಿದುಷಿ ಮೇರಿ ಬೆನ್ನಿಯವರನ್ನು ಗುರುವಂದನೆ ಮಾಡಿ ಗೌರವಿಸಲಾಯಿತು.
ವಿಘ್ನ ವಿನಾಯಕನ ಸುಂದರ ನಾಟ್ಯ ಪ್ರಸ್ತುತಿಯಿಂದ ಪ್ರಾರಂಭವಾದ ಕಾರ್ಯಕ್ರಮ ನೋಡುಗರ ಕುತೂಹಲ ಇನ್ನೂ ಹೆಚ್ಚಿಸಿತು. ಪುಟಾಣಿಗಳು ಕಾಲಿಗೆ ಗೆಜ್ಜೆಕಟ್ಟಿ ಪುಟ್ಟ ಹೆಜ್ಜೆಗಳನಿಟ್ಟು ಕುಣಿದ ಸೊಬಗನ್ನು ಕಂಡು ಬೆರಗಾದವರು. .ಮಕ್ಕಳ ಜೊತೆ ಹೆತ್ತವರೂ ಜತೆಯಾಗಿ ಸಾತ್ ನೀಡಿದರು. ದಕ್ಷಿಣ ಹಾಗೂ ಉತ್ತರ ಭಾರತದ ಶೈಲಿಯ ನೃತ್ಯ,ಜಾನಪದ, ಹೀಗೆ ಹಲವು ಬಗೆಯ ನೃತ್ಯದ ಮನೋರಂಜನೆ ಸವಿದವರು.
ಸಂಸ್ಥೆಯ ಪ್ರತಿಭಾನ್ವಿತೆ ವಿದ್ಯಾರ್ಥಿನಿ ದಿ. ಕುಮಾರಿ ಸಾತ್ವಿ ನಿತ್ಯಾನಂದ ಶೆಟ್ಟಿ ಯ ಸ್ಮರಣಾರ್ಥ "ಕೃಷ್ಣ ಪ್ರಿಯ" ರೂಪಕ ಮಹಾಭಾರತದಲ್ಲಿ ನಾರಿಯರ ಜೊತೆ ಶ್ರೀ ಕೃಷ್ಣನ ಒಡನಾಟ ಹಾಗೂ ಸಾಗಿದ ಹಾದಿಗೆ ಮುಳುವಾದ ದುಷ್ಟರಿಗೆ ಶಿಕ್ಷೆ ,ಒಳ್ಳೆಯತನಕ್ಕೆ ಶ್ರೀ ರಕ್ಷೆಯನ್ನು ನೀಡಿ ಲೋಕದ ಕ್ಷೇಮವೇ ಮೊದಲು ಎಂದು ಸಾರಿದ ಭಗವದ್ಗೀತೆಯ ಸಾರಾಂಶ ಸೇರಿದ ಜನಸ್ತೋಮದ ಚಪ್ಪಾಳೆಯ ಕರಾಡತನವೇ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಯಿತು. ವಿದುಷಿ ರೂಪ ಕಿರಣ್ ಕೃಷ್ಣನಾಗಿ ಕಾಣಿಸಿಕೊಂಡದ್ದು ವಿಶೇಷ ಆಕರ್ಷಣೆಯಾಗಿತ್ತು.
ಸುಮಾರು 60 ರಿಂದ 79 ಮಂದಿ ಕಲಾವಿದರು ನೀಡಿದ ಪ್ರದರ್ಶನಕ್ಕೆ ತುಂಬಿದ ಸಭಾಂಗಣದಲ್ಲಿ ಕಲಾಪ್ರೇಮಿಗಳು ಕೊನೆಯ ತನಕ ವೀಕ್ಷಿಸಿ ಪುಳಕಿತರಾದರು. ಕಾರ್ಯಕ್ರಮಕ್ಕೆ ಪ್ರಯೋಜಕತ್ವವನ್ನು ನೀಡಿದ ಮಹನೀಯರನ್ನು ಹಾಗೂ ಬಂದ ಅತಿಥಿ ಅಭ್ಯಾಗತರನ್ನು ವೇದಿಕೆಗೆ ಕರೆದು ಗೌರವಿಸಲಾಯಿತು. ಕೊನೆಯಲ್ಲಿ ಧನ್ಯವಾದ ನೀಡುವ ಮೂಲಕ ಕಾರ್ಯಕ್ರಮ ಪೂರ್ಣಗೊಂಡಿತು.ನಿಖಿತಾ ಹಾಗೂ ದೃಷ್ಟಿ ಶಾನುಭೋಗ್ ಕಾರ್ಯಕ್ರಮ ನಿರೂಪಿಸಿದರು.