ಮಾಸ್ಕೋ, ಅ.07 (DaijiworldNews/AA): ರಷ್ಯಾದ ಕಪ್ಪು ಸಮುದ್ರ ಕರಾವಳಿಯ ಬಳಿ ಕಚ್ಚಾ ತೈಲ ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊಂದಿದ ತೈಲ ಟ್ಯಾಂಕರ್ ಮೇಲೆ ಉಕ್ರೇನ್ ನೌಕಾ ಡ್ರೋನ್ ಭೀಕರ ದಾಳಿ ನಡೆಸಿದ್ದು, 23 ಮಂದಿ ಭಾರತೀಯ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

ಸೋಚಿ ನಗರದ ಸಮೀಪ ಈ ದಾಳಿ ನಡೆದಿದೆ. ಡ್ರೋನ್ ದಾಳಿಯ ಪರಿಣಾಮ ಹಡಗಿನಲ್ಲಿ ಬೃಹತ್ ಬೆಂಕಿ ಕಾಣಿಸಿಕೊಂಡಿದೆ. ಹಡಗಿನಲ್ಲಿದ್ದ ಎಲ್ಲಾ 23 ಮಂದಿ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ.
ಬೆಂಕಿಯ ತೀವ್ರತೆ ಹೆಚ್ಚಿರುವ ಕಾರಣ ಅಗ್ನಿಶಾಮಕ ಸಿಬ್ಬಂದಿಗೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸಮುದ್ರದ ಮೇಲ್ಮೈಯಲ್ಲಿ ಕಚ್ಚಾ ತೈಲ ವ್ಯಾಪಕವಾಗಿ ಹರಡಿ ಉರಿಯುತ್ತಿದ್ದು, ಜ್ವಾಲೆಯ ತೀವ್ರತೆ ಕಡಿಮೆಯಾದ ನಂತರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ರಷ್ಯಾ ತಿಳಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸೋಚಿ ನಗರದ ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು ಸಮುದ್ರದ ಮಧ್ಯೆ ಹಡಗು ಹೊತ್ತಿ ಉರಿಯುತ್ತಿದ್ದು, ಕಪ್ಪು ಹೊಗೆಯ ದಟ್ಟ ಮೋಡ ಆಕಾಶಕ್ಕೆ ಚಿಮ್ಮುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.