ಕಾಂಗೋ, ಅ.05 (DaijiworldNews/TA): ಕಾಂಗೋ ನದಿಯಲ್ಲಿ ಎರಡು ಬೋಟ್ಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಕನಿಷ್ಠ 30 ಮಂದಿ ಜಲಸಮಾಧಿಯಾಗಿದ್ದು, ಹತ್ತಾರು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಎಕ್ವೇಟರ್ ಪ್ರಾಂತ್ಯದ ನ್ಗೊಂಬೆ-ಲುಕೋಲೆಲಾ ಪ್ರದೇಶದ ಬಳಿ ಈ ದುರಂತ ಸಂಭವಿಸಿದೆ.

ಅಪಘಾತಕ್ಕೀಡಾದ ಒಂದು ಬೋಟ್ ದೇಶದ ವಾಯುವ್ಯ ಭಾಗದಲ್ಲಿರುವ ಉಬಾಂಗಿಯಿಂದ ರಾಜಧಾನಿ ಕಿನ್ಶಾಸಾಗೆ ತೆರಳುತ್ತಿತ್ತು. ಮತ್ತೊಂದು ಬೋಟ್ ಕಿನ್ಶಾಸಾದಿಂದ ಲುಕೋಲೆಲಾ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ಎರಡೂ ಬೋಟ್ಗಳು ಪರಸ್ಪರ ಡಿಕ್ಕಿಯಾಗಿವೆ.
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಉಬಾಂಗಿಯಿಂದ ಬರುತ್ತಿದ್ದ ಬೋಟ್ನಲ್ಲಿ ಅತಿಯಾದ ಪ್ರಮಾಣದ ಸರಕುಗಳನ್ನು ತುಂಬಲಾಗಿತ್ತು ಎನ್ನಲಾಗಿದೆ. ಎರಡು ಬೋಟ್ಗಳು ಡಿಕ್ಕಿಯಾದ ಕೂಡಲೇ ಉಬಾಂಗಿಯಿಂದ ಬರುತ್ತಿದ್ದ ಬೋಟ್ ನೀರಿನಲ್ಲಿ ಮುಳುಗಿದೆ. ಅದರಲ್ಲಿದ್ದ ಹಲವು ಪ್ರಯಾಣಿಕರು ನೀರಿನ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.
ಅಪಘಾತದ ಬಳಿಕ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಬದುಕುಳಿದವರು ಹಾಗೂ ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಕಾಂಗೋ ನದಿಯಲ್ಲಿ ಸಂಭವಿಸಿರುವ ಮತ್ತೊಂದು ಭೀಕರ ದುರಂತವು ನದಿಯಲ್ಲಿನ ಜಲಸಾರಿಗೆಯ ಸುರಕ್ಷತೆ ಕುರಿತು ಮತ್ತೊಮ್ಮೆ ಆತಂಕ ಮೂಡಿಸಿದೆ.