ಕಠ್ಮಂಡು, ಸೆ.28 (DaijiworldNews/AA): ನೇಪಾಳದ ಹಿಮ್ಲುಂಗ್ ಹಿಮಾಲ್ ಶೃಂಗದ ಬೇಸ್ ಕ್ಯಾಂಪ್ನಲ್ಲಿ ಸಂಭವಿಸಿದ ಭೀಕರ ಹಿಮಪಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಇದುವರೆಗೆ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ 12 ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೇಪಾಳದ ಮನಾಂಗ್ ಜಿಲ್ಲೆಯ ನಾರ್ ಫೂ ಪ್ರದೇಶದಲ್ಲಿರುವ 7,126 ಮೀಟರ್ ಎತ್ತರದ ಹಿಮ್ಲುಂಗ್ ಹಿಮಾಲ್ ಶೃಂಗದ ಮೂಲ ಶಿಬಿರದಲ್ಲಿ ಭೀಕರ ಹಿಮಪಾತ ಸಂಭವಿಸಿದೆ. ಪರ್ವತಾರೋಹಿಗಳಿಗೆ ಮಾರ್ಗದರ್ಶನ ಮತ್ತು ತಾಂತ್ರಿಕ ನೆರವು ನೀಡುತ್ತಿದ್ದ ನೇಪಾಳಿ ಸಿಬ್ಬಂದಿ ತಂಗಿದ್ದ ಟೆಂಟ್ಗಳು ಹಿಮದಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿವೆ.
ಇದುವರೆಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಕಠ್ಮಂಡುವಿನಿಂದ 14 ಸದಸ್ಯರ ರಕ್ಷಣಾ ತಂಡ ಆಗಮಿಸಿದ್ದು, ಹೆಲಿಕಾಪ್ಟರ್ ಮತ್ತು ವಿಶೇಷ ಉಪಕರಣಗಳ ಸಹಾಯದಿಂದ ಹಿಮದಡಿಯಲ್ಲಿ ಹೂತುಹೋಗಿರುವ ಉಳಿದ 12 ಮಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.