ಇಸ್ಲಾಮಾಬಾದ್ , ಸೆ. 12 (DaijiworldNews/AK):ಭಾರತದ ಆತಿಥ್ಯದಲ್ಲಿ ಇಂದಿನಿಂದ 18ನೇ ಬ್ರಿಕ್ಸ್ ಶೃಂಗಸಭೆ ಆರಂಭಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ಅಚ್ಚರಿ ವಿಷಯವೊಂದು ಬೆಳಕಿಗೆ ಬಂದಿದೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದಂತಹ ಉದಯೋನ್ಮುಖ ಆರ್ಥಿಕತೆಗಳ ಒಕ್ಕೂಟ ʻಬ್ರಿಕ್ಸ್ʼ ಸೇರಲು ಪಾಕಿಸ್ತಾನ ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿತ್ತು ಅನ್ನೋದು ತಿಳಿದುಬಂದಿದೆ.

ಬ್ರಿಕ್ಸ್ ಒಕ್ಕೂಟ ಕಳೆದ ವರ್ಷ ʻಬ್ರಿಕ್ಸ್+ʼ (BRICS+) ಆಗಿ ವಿಸ್ತರಣೆಗೊಂಡಿತು. ಈಜಿಪ್ಟ್, ಇಥಿಯೋಪಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳನ್ನು ಹೊಸ ಸದಸ್ಯ ರಾಷ್ಟ್ರಗಳನ್ನಾಗಿ ಸೇರಿಸಿಕೊಳ್ಳಲಾಯಿತು. ಹಾಗಾಗಿ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕೂಡ ಬ್ರಿಕ್ಸ್ ಸದಸ್ಯತ್ವ ಕೋರಿ ಅರ್ಜಿ ಸಲ್ಲಿಸಿತ್ತು. ಆದರೆ ಭಾರತಕ್ಕಿರುವ ‘ವೀಟೋ’ (ನಿಷೇಧಾಧಿಕಾರ) ಅಧಿಕಾರವು ಪಾಕಿಸ್ತಾನವನ್ನು ಹೊರಗಿಡುವಂತೆ ಮಾಡಿದೆ. ಬ್ರಿಕ್ಸ್ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ಇತರ 29 ದೇಶಗಳ ಪೈಕಿ ಪಾಕಿಸ್ತಾನವೂ ಒಂದಾಗಿದೆ. ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸವಾಲುಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇನ್ನೂ ಬ್ರಿಕ್ಸ್ ಒಕ್ಕೂಟ ಪ್ರವೇಶಕ್ಕೆ ಚೀನಾ ಮತ್ತು ರಷ್ಯಾದ ಬೆಂಬಲವಿದೆ ಎಂದು ಹೇಳಲಾಗುತ್ತಿದ್ದರೂ ಸದಸ್ಯತ್ವ ಇನ್ನೂ ಮರಿಚಿಕೆಯಾಗಿದೆ. ಇದಕ್ಕೆ ಕಾರಣ ಭಾರತದ ವಿರೋಧ. ʻಬ್ರಿಕ್ಸ್ʼ ಒಕ್ಕೂಟಕ್ಕೆ ಹೊಸ ಸದಸ್ಯರನ್ನ ಸೇರಿಸಿಕೊಳ್ಳಲು ಅಸ್ತಿತ್ವದಲ್ಲಿರುವ ಎಲ್ಲಾ ಸದಸ್ಯ ರಾಷ್ಟ್ರಗಳ ಒಮ್ಮತದ ಅನುಮೋದನೆ ಅತ್ಯಗತ್ಯವಾಗಿದೆ. ಆದ್ರೆ ಭಾರತ ವಿರೋಧ ಇರೋದ್ರಿಂದ ಪಾಕಿಸ್ತಾನಕ್ಕೆ ಬ್ರಿಕ್ಸ್ ಸದಸ್ಯತ್ವ ಕನಸಾಗಿ ಉಳಿದಿದೆ.